ಹೊಸನಗರ: ಕುಟುಂಬದ ಆರ್ಥಿಕ, ಸಾಮಾಜಿಕ ಹಾಗೂ ಭಾವನಾತ್ಮಕ ನೆಮ್ಮದಿಗೆ ಮಹಿಳೆಯೇ ಆಧಾರಸ್ತಂಭ. ಮನೆಯನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ಧಾರೆ ಎರೆಯುವ ಶಕ್ತಿ ಆಕೆಗೆ ಮಾತ್ರವಿದೆ ಎಂದು ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಸುಧಾ ಚೈತನ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಬಿ.ಸಿ. ಟ್ರಸ್ಟ್ ಹೊಸನಗರ ತಾಲ್ಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ ಕುರಿತ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಸಮಾಜದ ಮನಸ್ಥಿತಿ ಬದಲಾಗಲಿ:
ಮಹಿಳೆಯರ ಆಶೋತ್ತರ ಹಾಗೂ ಸಾಂವಿಧಾನಿಕ ಹಕ್ಕುಗಳಿಗೆ ಕುಟುಂಬ ಮತ್ತು ಸಮಾಜದ ನಿರಂತರ ಬೆಂಬಲ ಅತ್ಯಗತ್ಯ. ಹೆಣ್ಣು ಕೇವಲ ಚೌಕಟ್ಟಿಗೆ ಸೀಮಿತವಾಗದೆ ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು. ಕುಟುಂಬದಲ್ಲಿ ಸಾಮರಸ್ಯ ನೆಲೆಸಲು ಮತ್ತು ಸಮಸ್ಯೆಗಳು ನಿವಾರಣೆಯಾಗಲು ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ. ನಮ್ಮ ಹಿರಿಯರ ಮೌಲ್ಯಗಳು, ಸಂಸ್ಕೃತಿ ಮತ್ತು ಆದರ್ಶಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಹೊಣೆಗಾರಿಕೆ ತಾಯಂದಿರ ಮೇಲಿದೆ ಎಂದು ಸುಧಾ ಚೈತನ್ಯ ಕರೆ ನೀಡಿದರು.

ಜ್ಯೋತಿ ಬೆಳಗಿಸಿ ಚಾಲನೆ:
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯೆ ನಾಗರತ್ನ ದೇವರಾಜ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ, ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿ, ಅವರಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸರ್ಕಾರಿ ಸೌಲಭ್ಯಗಳ ಸದ್ಬಳಕೆಗೆ ಕರೆ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೈದ್ಯರಾದ ಡಾ. ಸಜನಿ ಪ್ರಭಾಕರ್ ಶೆಟ್ಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಎಚ್.ಡಿ. ಮಾತನಾಡಿ, “ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯಿಂದ ತಾಯಿ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ ಮತ್ತು ಆರ್ಥಿಕ ಭದ್ರತೆಯ ವಿವಿಧ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದರು. ಈ ಸೌಲಭ್ಯಗಳು ಅರ್ಹ ಗ್ರಾಮೀಣ ಫಲಾನುಭವಿಗಳಿಗೆ ತಲುಪುವಂತೆ ಸಂಘದ ಸದಸ್ಯರು ಸೇತುವೆಯಾಗಿ ಕೆಲಸ ಮಾಡಬೇಕು” ಎಂದರು.
ಗಮನ ಸೆಳೆದ ಡೊಳ್ಳು ವಾದನ:
ವೇದಿಕೆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಸ್ವಸಹಾಯ ಸಂಘಗಳಿಂದ ತಮಗೆ ದೊರೆತ ಆರ್ಥಿಕ ಸ್ವಾವಲಂಬನೆ ಹಾಗೂ ಜೀವನಮಟ್ಟದಲ್ಲಾದ ಸಕಾರಾತ್ಮಕ ಬದಲಾವಣೆಗಳ ಅನುಭವ ಹಂಚಿಕೊಂಡರು. ನಂತರ ಸದಸ್ಯೆಯರು ಪ್ರದರ್ಶಿಸಿದ ಜಾನಪದ ಕಲೆಯಾದ ಡೊಳ್ಳು ಕುಣಿತ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಳೆಯರು ಸಾಂಸ್ಕೃತಿಕವಾಗಿಯೂ ಸೈ ಎನಿಸಿಕೊಂಡು ಸಭಿಕರಲ್ಲಿ ಉತ್ಸಾಹ ತುಂಬಿದರು.
ಕಾರ್ಯಕ್ರಮದ ಆರಂಭದಲ್ಲಿ ರಜನಿ ಮತ್ತು ತಂಡದವರು ಪ್ರಾರ್ಥಿಸಿದರು. ಯೋಜನೆಯ ಮೇಲ್ವಿಚಾರಕಿ ಸರ್ವಮಂಗಳ ಅತಿಥಿಗಳನ್ನು ಸ್ವಾಗತಿಸಿದರು. ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶಾಂತಕುಮಾರಿ ವಂದಿಸಿದರು. ಸಭೆಯಲ್ಲಿ ತಾಲ್ಲೂಕಿನ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು, ಪ್ರೇರಕರು ಹಾಗೂ ನೂರಾರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

