ಹೊಸನಗರ

ಬೆಳೆ ವಿಮೆ ಹೆಸರಲ್ಲಿ ಮಲೆನಾಡಿನ ರೈತರಿಗೆ ಪಂಗನಾಮ: ಮಾಮ್‌ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಆಕ್ರೋಶ

ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಹೊಸನಗರ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಸೇರಿದಂತೆ ಹಲವು ಬೆಳೆಗಳು ವ್ಯಾಪಕವಾಗಿ ನಾಶವಾಗಿದ್ದವು. ರೈತರು ತಮ್ಮ ಸ್ವಂತ ಜೇಬಿನಿಂದ ಪ್ರೀಮಿಯಂ ಕಂತು ಪಾವತಿಸಿ ನಷ್ಟದ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ವಿಮಾ ಮೊತ್ತವು ರೈತರ ಗಾಯದ ಮೇಲೆ ಬರೆ ಎಳೆದಂತಿದೆ ಎಂದು ಕೆ.ವಿ.ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.

K V Krishnamurthi

ಹೊಸನಗರ: ಪ್ರಕೃತಿ ವಿಕೋಪ ಮತ್ತು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೀಡಾಗುವ ಅನ್ನದಾತರಿಗೆ ಆಸರೆಯಾಗಬೇಕಿದ್ದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ, ಮಲೆನಾಡಿನಲ್ಲಿ ಸಂಪೂರ್ಣ ಅವೈಜ್ಞಾನಿಕವಾಗಿ ಜಾರಿಯಾಗುತ್ತಿದ್ದು ರೈತರಿಗೆ ತೀವ್ರ ಅನ್ಯಾಯವೆಸಗಲಾಗುತ್ತಿದೆ ಎಂದು ಮಾಮ್‌ಕೋಸ್ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಮಲೆನಾಡಿನ ರೈತರು ಎದುರಿಸುತ್ತಿರುವ ವಿಮಾ ಪರಿಹಾರದ ತಾರತಮ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯನ್ನು ತೀವ್ರವಾಗಿ ಖಂಡಿಸಿದರು.

ಕಟ್ಟಿದ ಕಂತಿಗಿಂತ ಪರಿಹಾರ ಕಡಿಮೆ, ಅನ್ನದಾತನಿಗೆ ಗಾಯದ ಮೇಲೆ ಬರೆ :

ಕಳೆದ ವರ್ಷ (2025) ಮಳೆಗಾಲದಲ್ಲಿ ಸುರಿದ ಧಾರಾಕಾರ ಮಳೆಗೆ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಸೇರಿದಂತೆ ಹಲವು ಬೆಳೆಗಳು ವ್ಯಾಪಕವಾಗಿ ನಾಶವಾಗಿದ್ದವು. ರೈತರು ತಮ್ಮ ಸ್ವಂತ ಜೇಬಿನಿಂದ ಪ್ರೀಮಿಯಂ ಕಂತು ಪಾವತಿಸಿ ನಷ್ಟದ ನಿರೀಕ್ಷೆಯಲ್ಲಿದ್ದರು. ಆದರೆ ಇತ್ತೀಚೆಗೆ ಬಿಡುಗಡೆಯಾದ ವಿಮಾ ಮೊತ್ತವು ರೈತರ ಗಾಯದ ಮೇಲೆ ಬರೆ ಎಳೆದಂತಿದೆ. ನಷ್ಟ ಪರಿಹಾರ ಹಾಗಿರಲಿ, ರೈತರು ಕಟ್ಟಿದ ವಿಮಾ ಕಂತಿನ ಮೊತ್ತವೂ ಮರಳಿ ಬಾರದೆ ನಷ್ಟ ಅನುಭವಿಸುವಂತಾಗಿದೆ. ಕೇವಲ ನೂರಾರು ರೂಪಾಯಿಗಳ ಅಣಕದ ಮೊತ್ತವನ್ನು ಖಾತೆಗೆ ಜಮೆ ಮಾಡಿ ವಿಮಾ ಕಂಪನಿಗಳು ರೈತರ ಹಿತವನ್ನು ಕಡೆಗಣಿಸಿವೆ ಎಂದು ಆಕ್ರೋಶ ಹೊರಹಾಕಿದರು.

ಮಳೆಮಾಪನ ವ್ಯವಸ್ಥೆ ಹಾಗೂ ವಿಚಿತ್ರ ತಾರತಮ್ಯ:

ಶಿವಮೊಗ್ಗ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ಗುರುತಿಸಿಕೊಂಡಿರುವ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲೇ ಇಂತಹ ತಾರತಮ್ಯ ಎದ್ದು ಕಾಣುತ್ತಿದೆ. ಕೇವಲ 10–15 ಕಿಲೋಮೀಟರ್ ಅಂತರದಲ್ಲಿರುವ ಪಕ್ಕದ ಗ್ರಾಮಗಳಲ್ಲಿ ಸಾವಿರಾರು ರೂಪಾಯಿಗಳ ಪರಿಹಾರ ಬಿಡುಗಡೆಯಾಗಿದ್ದರೆ, ಅತಿ ಹೆಚ್ಚು ಮಳೆಯಾಗಿ ಬೆಳೆ ಹಾನಿಗೊಳಗಾದ ನಗರ ಹೋಬಳಿಯ ಹಲವು ಗ್ರಾಮಗಳಿಗೆ ಕನಿಷ್ಠ ಪರಿಹಾರವನ್ನೂ ನೀಡಲಾಗಿಲ್ಲ. ಸ್ಥಳೀಯ ಮಳೆಮಾಪನ ಕೇಂದ್ರಗಳ (Rain Gauge Stations) ತಾಂತ್ರಿಕ ದೋಷ, ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ಸಾಫ್ಟ್‌ವೇರ್ ಲೆಕ್ಕಾಚಾರದ ಅವೈಜ್ಞಾನಿಕತೆಯೇ ಇಂತಹ ಪ್ರಮಾದಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಉತ್ತಮವಾಗಿದ್ದರೂ, ರಾಜ್ಯ ಸರ್ಕಾರದ ಅನುಷ್ಠಾನ ವೈಫಲ್ಯ ಹಾಗೂ ವಿಮಾ ಕಂಪನಿಗಳ ಲಾಭಕೋರ ನೀತಿಯಿಂದಾಗಿ ಯೋಜನೆ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ ಎಂದರು.

ರೋಗಬಾಧೆಯಿಂದ ತತ್ತರಿಸಿದ ಅಡಿಕೆ ಬೆಳೆಗಾರ:

ಮಲೆನಾಡಿನ ಅಡಿಕೆ ಬೆಳೆಗಾರರು ಈಗಾಗಲೇ ಕೊಳೆರೋಗ ಮತ್ತು ಮಾರಕ ಎಲೆಚುಕ್ಕಿ ರೋಗದಂತಹ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಸಾಲದ ಸುಳಿಗೆ ಸಿಲುಕಿರುವ ಬೆಳೆಗಾರರಿಗೆ, ಬೆಳೆ ವಿಮೆಯಾದರೂ ಸ್ವಲ್ಪ ಆರ್ಥಿಕ ಚೇತರಿಕೆ ನೀಡಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವ್ಯವಸ್ಥೆಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆ ಆಸೆಯೂ ಕಮರಿಹೋಗಿದೆ.

ಹೋರಾಟದ ಎಚ್ಚರಿಕೆ:

ಹಿಂದಿನ ವರ್ಷವೂ ಇದೇ ರೀತಿಯ ದೋಷ ಉಂಟಾದಾಗ, ‘ಮಳೆಮಾಪಕಗಳು ಸ್ಥಗಿತಗೊಂಡಿದ್ದರೆ ನೆರೆಯ ಸರ್ಕಾರಿ ಮಳೆಮಾಪನ ಕೇಂದ್ರಗಳ ನಿಖರ ದತ್ತಾಂಶವನ್ನು ಆಧರಿಸಿ ಪರಿಹಾರ ಒದಗಿಸಲಾಗುವುದು’ ಎಂದು ಜಿಲ್ಲಾಡಳಿತ ನೀಡಿದ್ದ ಭರವಸೆ ಕೇವಲ ಮಾತಿನಲ್ಲೇ ಉಳಿದಿದೆ. ಜಿಲ್ಲಾಡಳಿತ ಹಾಗೂ ಕೃಷಿ-ತೋಟಗಾರಿಕೆ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಿ, ಈ ಅವೈಜ್ಞಾನಿಕ ಮಾನದಂಡಗಳನ್ನು ಮರುಪರಿಶೀಲಿಸಬೇಕು. ಕಳೆದ ಎರಡು ವರ್ಷಗಳ ಬಾಕಿ ಸೇರಿದಂತೆ ಅರ್ಹ ರೈತರಿಗೆ ನ್ಯಾಯಯುತ ಪರಿಹಾರ ಬಿಡುಗಡೆ ಮಾಡದಿದ್ದರೆ, ನಗರ ಹೋಬಳಿ ಹಾಗೂ ತಾಲ್ಲೂಕಿನ ರೈತರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಕೆ.ವಿ. ಕೃಷ್ಣಮೂರ್ತಿ ಎಚ್ಚರಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]