ಹೊಸನಗರ

ಕನ್ನಡದ ಯುವಜನರಿಗೆ ಉದ್ಯೋಗ ನೀಡಿ ಕನ್ನಡದ ಕಹಳೆ ಮೊಳಗಿಸಿ: ಶಾಸಕ ಗೋಪಾಲಕೃಷ್ಣ ಬೇಳೂರು ಕರೆ

ದೇಶ-ವಿದೇಶಗಳಲ್ಲಿ ಕನ್ನಡದ ಕಹಳೆ ಮೊಳಗಿದ್ದು, ನಮ್ಮ ಭಾಷೆಯೇ ಕನ್ನಡಿಗರ ನಿಜವಾದ ಶಕ್ತಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

RPT Kannada Rajyothsava 2

ರಿಪ್ಪನ್‌ಪೇಟೆ: “ದೇಶ-ವಿದೇಶಗಳಲ್ಲಿ ಕನ್ನಡದ ಕಹಳೆ ಮೊಳಗಿದ್ದು, ನಮ್ಮ ಭಾಷೆಯೇ ಕನ್ನಡಿಗರ ನಿಜವಾದ ಶಕ್ತಿ. ನಮ್ಮ ನೆಲ-ಜಲ ಪಡೆದುಕೊಂಡು ಕನ್ನಡಿಗರಿಗೆ ಉದ್ಯೋಗ ನೀಡದೆ ಅವಮಾನಿಸುವುದನ್ನು ಮುಂದಿನ ದಿನಗಳಲ್ಲಿ ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ,” ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘದ 6ನೇ ವಾರ್ಷಿಕೋತ್ಸವ, ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ 5ನೇ ವರ್ಷದ ಸ್ಮರಣೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಕನ್ನಡ ಕೇವಲ ನವೆಂಬರ್ ತಿಂಗಳ ಆಚರಣೆಯಾಗದೆ ನಿತ್ಯೋತ್ಸವವಾಗಬೇಕು. ಗಡಿ ಭಾಗದ ನಿಪ್ಪಾಣಿಯಲ್ಲಿ ಅನ್ಯಭಾಷಿಕರ ದಬ್ಬಾಳಿಕೆಯ ವಿರುದ್ಧ ಹೋರಾಡುವುದು ನಮ್ಮ ಹಕ್ಕು. ನಾಡಿನಲ್ಲಿ ಉದ್ಯಮ ಸ್ಥಾಪಿಸಲು ಭೂಮಿ ಹಾಗೂ ಕಾವೇರಿ ನೀರು ಪಡೆದುಕೊಂಡ ಸಂಸ್ಥೆಗಳು, ಸ್ಥಳೀಯ ಕನ್ನಡಿಗ ಯುವಕ-ಯುವತಿಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲೇಬೇಕು,” ಎಂದು ಆಗ್ರಹಿಸಿದರು.

ಕೊಟ್ಟ ಮಾತು ತಪ್ಪಿದರೆ ರಿಪ್ಪನ್‌ಪೇಟೆಗೆ ಕಾಲಿಡಲ್ಲ!:

“ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಇಲ್ಲಿನ ವಿನಾಯಕ ವೃತ್ತದ ರಸ್ತೆ ಅಗಲೀಕರಣ, ಬಸ್ ತಂಗುದಾಣ ನಿರ್ಮಾಣ ಸೇರಿದಂತೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಿಪ್ಪನ್‌ಪೇಟೆಗೆ ಕಾಲಿಡುವುದಿಲ್ಲ,” ಎಂದು ಶಾಸಕರು ಸಾರ್ವಜನಿಕವಾಗಿ ವಾಗ್ದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಕೆರೆಹಳ್ಳಿ ಕೆ. ದೇವರಾಜ್ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಆರ್.ಎ. ಚಾಬುಸಾಬ್, ಜೆಡಿಎಸ್ ಮುಖಂಡ ಎನ್. ವರ್ತೇಶ್, ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್, ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷೆ ಆರ್.ಡಿ. ಶೀಲಾ, ಪ್ರಮುಖರಾದ ಡಿ.ಇ. ಮಧುಸೂದನ್, ಆರ್.ಎಂ. ನಿರಂಜನ್, ಆಸಿಫ್ ಭಾಷಾ, ಹಸನಬ್ಬ, ಶ್ರೀಧರ, ರವೀಂದ್ರ ಕೆರೆಹಳ್ಳಿ, ಆರ್.ಎಚ್. ಶ್ರೀನಿವಾಸ ಆಚಾರ್, ನರಸಿಂಹ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ:

ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಯಿ ಭುವನೇಶ್ವರಿಯ ಭಾವಚಿತ್ರದ ಭವ್ಯ ಮೆರವಣಿಗೆಗೆ ಸ್ಥಳೀಯ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಕನ್ನಡ ಧ್ವಜ ಪ್ರದರ್ಶಿಸಿ ಚಾಲನೆ ನೀಡಿದರು.

ಹೊಸನಗರ ರಸ್ತೆಯ ಜಿಎಸ್‌ಬಿ ಸಮಾಜ ಮಂದಿರದಿಂದ ಆರಂಭಗೊಂಡ ಮೆರವಣಿಗೆಯು ಸಾಗರ-ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಗಳಲ್ಲಿ ಸಾಗಿತು. ಡೊಳ್ಳು ಕುಣಿತ, ಕೋಲಾಟ, ಚಂಡೆ ವಾದನ ಹಾಗೂ ಪುಟಾಣಿ ಮಕ್ಕಳ ಛದ್ಮವೇಷ ಸ್ಪರ್ಧೆಗಳು ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದವು.

ಡೊಳ್ಳು-ಕೋಲಾಟಕ್ಕೆ ಶಾಸಕರ ಹೆಜ್ಜೆ:

ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಡೊಳ್ಳು ಮತ್ತು ಕೋಲಾಟದ ನಾದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರೂ ಹೆಜ್ಜೆ ಹಾಕಿ ಕುಣಿಯುವ ಮೂಲಕ ಕಲಾವಿದರನ್ನು ಹುರಿದುಂಬಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]