ಹೊಸನಗರ: ಹೆಣ್ಣು ಅಥವಾ ಗಂಡು ಎಂಬ ತಾರತಮ್ಯವಿಲ್ಲದೆ ಮಕ್ಕಳ ಮೇಲೆ ಎಸಗುವ ಯಾವುದೇ ಲೈಂಗಿಕ ದೌರ್ಜನ್ಯವು ಪೋಕ್ಸೋ ಕಾಯ್ದೆಯಡಿಯಲ್ಲಿ ಗಂಭೀರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಪಟ್ಟಣದ ಗುರೂಜಿ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯಲ್ಲಿ ‘ಸುರಕ್ಷಿತ ಬಾಲ್ಯ’ ಅಭಿಯಾನದಡಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಹಕ್ಕುಗಳು ಹಾಗೂ ಸುರಕ್ಷತೆ ಕುರಿತ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಲ್ಯವಿವಾಹ ನಡೆಸುವುದು ಮಾತ್ರವಲ್ಲದೆ, ಅದರಲ್ಲಿ ಪಾಲ್ಗೊಳ್ಳುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿಗಳ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಜಾಗರೂಕತೆಯಿಂದ ಉಪಯೋಗಿಸಬೇಕು. ಜ್ಞಾನದ ಜತೆಗೆ ಧೈರ್ಯ, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದು ಅಗತ್ಯ. ಸಂವಿಧಾನದ 21ಎ ವಿಧಿಯಂತೆ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದ್ದು, ಮಕ್ಕಳನ್ನು ಯಾವುದೇ ದುಡಿಮೆಗೆ ದೂಡುವುದು ಕಾನೂನುಬಾಹಿರ ಎಂದು ಅವರು ತಿಳಿಸಿದರು.
ಸರ್ಕಾರಿ ಅಭಿಯೋಜಕಿ ಸುಮಂಗಳಾ ಮಾತನಾಡಿ, 18 ವರ್ಷಕ್ಕಿಂತ ಕೆಳಗಿನ ಪ್ರತಿಯೊಬ್ಬರೂ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತಾರೆ. ಯಾರಾದರೂ ಅನುಚಿತವಾಗಿ ಸ್ಪರ್ಶಿಸಿದರೆ, ಕಿರುಕುಳ ನೀಡಿದರೆ ಮಕ್ಕಳು ಅದನ್ನು ಗೌಪ್ಯವಾಗಿಡದೆ ತಕ್ಷಣ ಶಿಕ್ಷಕರು ಅಥವಾ ಪೋಷಕರ ಗಮನಕ್ಕೆ ತರಬೇಕು. ಬಾಲ್ಯವಿವಾಹವು ಶಿಕ್ಷಣಕ್ಕೆ ಧಕ್ಕೆ ತರುವುದರೊಂದಿಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿ, ವಕೀಲ ಗುರುಕಿರಣ್ ಮಾತನಾಡಿ, ಪೋಕ್ಸೋ ಕಾಯ್ದೆಯು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತು ಹಾಗೂ ವಿಚಾರಣೆಯ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡಲಾಗುತ್ತದೆ. ಮಕ್ಕಳ ಸ್ನೇಹಿ ವಾತಾವರಣದಲ್ಲಿ ತ್ವರಿತ ವಿಚಾರಣೆ ನಡೆಸಿ ನ್ಯಾಯ ಒದಗಿಸಲಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ., ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಆಡಳಿತ ಮಂಡಳಿಯ ಸುದೇಶ್ ಕಾಮತ್, ಸಂತೋಷ್ ಕಾಮತ್, ಕಾರ್ಯದರ್ಶಿ ಶಾಂತಮೂರ್ತಿ, ನಿರ್ದೇಶಕರಾದ ಸದಾಶಿವ ಶ್ರೇಷ್ಠಿ, ನಾಗೇಶ್ ಹಾಗೂ ಶಾಲಾ ಸಿಬ್ಬಂದಿ, ಪೋಷಕರು ಉಪಸ್ಥಿತರಿದ್ದರು.

