ಹೊಸನಗರ

ತಂತ್ರಜ್ಞಾನದಲ್ಲೂ ಕನ್ನಡ ಬಳಕೆಗೆ ಒತ್ತು ನೀಡಿ: ಹೊಸನಗರದಲ್ಲಿ ತಹಶೀಲ್ದಾರ್ ಕರೆ

71ನೇ ಕನ್ನಡ ರಾಜ್ಯೋತ್ಸವವು ಹೊಸನಗರದಲ್ಲಿ ಸಂಭ್ರಮದಿಂದ ನೆರವೇರಿತು.

Kannada Rajyothsava In Hosanagara

ಹೊಸನಗರ: “ಕನ್ನಡ ನಾಡು, ನುಡಿ ಹಾಗೂ ನೆಲ-ಜಲದ ಉಳಿವಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸಿ ಗೌರವಿಸುವ ಪವಿತ್ರ ಸಂದರ್ಭವೇ ಕನ್ನಡ ರಾಜ್ಯೋತ್ಸವ” ಎಂದು ತಾಲೂಕು ತಹಶೀಲ್ದಾರ್ ಭರತ್‌ರಾಜ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ 1956ರ ನವೆಂಬರ್ 1ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಬಳಿಕ 1973ರಲ್ಲಿ ಡಿ. ದೇವರಾಜ ಅರಸು ಅವರ ನೇತೃತ್ವದಲ್ಲಿ ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ಆಲೂರು ವೆಂಕಟರಾಯರು, ಕುವೆಂಪು, ದ.ರಾ. ಬೇಂದ್ರೆ ಸೇರಿದಂತೆ ಅಸಂಖ್ಯಾತ ಹಿರಿಯರ ಅವಿರತ ಹೋರಾಟದ ಫಲವಾಗಿ ಇಂದು ನಾವೆಲ್ಲ ಒಂದಾಗಿದ್ದೇವೆ. ಎರಡು ಸಾವಿರ ವರ್ಷಗಳ ಭವ್ಯ ಪರಂಪರೆ, ಶ್ರೇಷ್ಠ ಸಾಹಿತ್ಯ ಹಾಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಮೆ ಕನ್ನಡಕ್ಕಿದೆ. ಆದಿಕವಿ ಪಂಪ, ರನ್ನರಿಂದ ಹಿಡಿದು ಶರಣರು ಮತ್ತು ದಾಸಶ್ರೇಷ್ಠರು ಈ ನೆಲದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ” ಎಂದು ಸ್ಮರಿಸಿದರು.

ಮುಂದುವರಿದು ಮಾತನಾಡಿದ ಅವರು, “ಇಂದಿನ ಜಾಗತೀಕರಣದ ಯುಗದಲ್ಲಿ ಕನ್ನಡ ಭಾಷೆ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕನ್ನಡಾಭಿಮಾನವು ಕೇವಲ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗದೆ, ನಮ್ಮ ನಿತ್ಯಜೀವನದ ಉಸಿರಾಗಬೇಕು. ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಆಡಳಿತ, ದೈನಂದಿನ ವ್ಯವಹಾರ ಹಾಗೂ ಆಧುನಿಕ ತಂತ್ರಜ್ಞಾನದಲ್ಲಿ ಕನ್ನಡವನ್ನು ಸಕ್ರಿಯವಾಗಿ ಬಳಸುವ ಮೂಲಕ ಭಾಷೆಯನ್ನು ಬೆಳೆಸುವ ಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ವೃತ್ತ ನಿರೀಕ್ಷಕ ಗೌಡಪ್ಪ ಗೌಡರ್, ಪಿಎಸ್‌ಐ ಸಂತೋಷ್ ಬಾಗೋಜಿ, ಅಕ್ಷರ ದಾಸೋಹ ಯೋಜನಾ ಸಮನ್ವಯಾಧಿಕಾರಿ ಶೇಷಾಚಲ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪುಟ್ಟಾನಾಯ್ಕ್, ಸಿಡಿಪಿಒ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಗೀತಾ, ಶಿರಸ್ತೇದಾರ್ ಮಂಜುನಾಥ್ ಕಟ್ಟೆ, ಕಸಾಪ ತಾಲೂಕು ಅಧ್ಯಕ್ಷ ಗಣೇಶಮೂರ್ತಿ, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಮುಖಂಡರಾದ ರಂಗನಾಥ್, ಚಿರಾಗ್, ರಾಘವೇಂದ್ರ, ಕೆ.ಜಿ. ನಾಗೇಶ್, ಅಶ್ವಿನಿಕುಮಾರ್, ಡಾ. ಅಂಜಲಿ ರೇಣುಕೇಶ್, ಸುಹಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿಯ ಹಿರಿಮೆಯನ್ನು ಬಿಂಬಿಸುವ ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಜರುಗಿದವು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]