ರಿಪ್ಪನ್‌ಪೇಟೆ ; ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಬೋಯಿಂಗ್ ಏರ್ ಇಂಡಿಯಾ ದುರಾದೃಷ್ಟವಶಾತ್ ಅಪಘಾತಕ್ಕೀಡಾಗಿ 241 ಪ್ರಯಾಣಿಕರು ಮೃತಪಟ್ಟಿರುವರು. ವಿಮಾನ ಪತನಗೊಂಡ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳೂ ಮೃತಪಟ್ಟು, ಅನೇಕ ವಿದ್ಯಾರ್ಥಿಗಳು, ಪರಿಸರದ ನಾಗರೀಕರು ಗಾಯಗೊಂಡಿರುವುದು ದುರಾದೃಷ್ಟಕರ ಮತ್ತು ದುಃಖದ ಸಂಗತಿಯಾಗಿದೆ ಎಂದು ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಂತಾಪವನ್ನು ಸೂಚಿಸಿದ್ದಾರೆ.
ಗುಜರಾತ್ ರಾಜ್ಯದ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿಯವರೂ ಪ್ರಯಾಣಿಕರ ಪೈಕಿ ಒಬ್ಬರಾಗಿದ್ದು, ನಿಧನ ಹೊಂದಿರುವರು. ಸೌಮ್ಯ ಸ್ವಭಾವದ, ಸಜ್ಜನ ಆಡಳಿತಗಾರರಾಗಿ ಜನಪ್ರಿಯರಾಗಿದ್ದರಲ್ಲದೇ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು ಎಂದು ಸಂತಾಪ ಸಂದೇಶದಲ್ಲಿ ಶ್ರೀಗಳು ತಿಳಿಸಿದ್ದಾರೆ.
ಹಲವಾರು ಯುವಕ-ಯುವತಿಯರು, ವೈದ್ಯರು, ಇಂಜಿನಿಯರ್, ಉದ್ಯಮಿಗಳು, ಉದ್ಯೋಗಸ್ಥರು, ವಿದೇಶಿಯರು ವಿಮಾನ ಅಪಘಾತದಲ್ಲಿ ನಿಧನರಾಗಿರುವುದು ಆಘಾತವನ್ನುಂಟುಮಾಡಿದೆ. ನಿಧನರಾದ ಪ್ರಯಾಣಿಕರ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿ ನೀಡುವಂತಾಗಲೆಂದು ಹರಸುವೆವು.
ನಿಧನರಾದವರ ಆತ್ಮಕ್ಕೆ ಸದ್ಗತಿ ಲಭಿಸಲಿ ಮತ್ತು ಗಾಯಾಳುಗಳು ಬಹುಬೇಗ ಚೇತರಿಸಿಕೊಳ್ಳಲಿ ಎಂದು ಹೊಂಬುಜದ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮಹಾಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇವೆಂದು ತಿಳಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.