ಶಿವಮೊಗ್ಗ:“ಯೋಗ ಎಂಬುದು ದೇಹ, ಮನಸ್ಸು ಹಾಗೂ ಆತ್ಮದ ಸಂಯೋಜನೆಯಾಗಿದೆ. ಮಾನವ ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಿ ಆರೋಗ್ಯಪೂರ್ಣ ಜೀವನ ನಡೆಸಲು ಯೋಗ ಅತ್ಯಂತ ಅಗತ್ಯ. ಇಂತಹ ಯೋಗವನ್ನು ಪ್ರತಿಯೊಬ್ಬರೂ ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು,” ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧನಾ ಆಸ್ಪತ್ರೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಈ ದಿನಾಚರಣೆ ಕುರಿತು ಮಾತನಾಡಿದ ಅವರು, “ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆಯ ನಂತರ ಇಡೀ ಜಗತ್ತೇ ಯೋಗದ ಮಹತ್ವವನ್ನು ಗುರುತಿಸಿ ಅಳವಡಿಸಿಕೊಂಡಿದೆ. ಇದು ವಿಶ್ವದ ಜನತೆಗೆ ಶಾರೀರಿಕ ಹಾಗೂ ಮಾನಸಿಕ ಏಕತೆ, ಶಾಂತಿ ಮತ್ತು ಸಾಮರಸ್ಯವನ್ನು ಕಲಿಸುತ್ತದೆ,” ಎಂದು ತಿಳಿಸಿದರು.
2047ಕ್ಕೆ ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ, “ದೇಶವನ್ನು ವಿಶ್ವಗುರುವನ್ನಾಗಿ ಮಾಡಬೇಕಾದರೆ ಪ್ರತಿಯೊಬ್ಬನೂ ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕು ಎಂಬ ಸಂಕಲ್ಪ ಮಾಡಬೇಕು. ರಾಷ್ಟ್ರದ ಪ್ರಗತಿಗಾಗಿ ನಾವು ಎಲ್ಲರೂ ಒಟ್ಟಾಗಿ ಕ್ರಿಯಾಶೀಲರಾಗಬೇಕು,” ಎಂಬುದಾಗಿ ಅವರು ಒತ್ತಾಯಿಸಿದರು.
ಯೋಗದಂತಹ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಚಟುವಟಿಕೆಯಿಂದ ಬದುಕು ಉತ್ತಮವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.ಡಾ. ಧನಂಜಯ ಸರ್ಜಿ ಅವರು ಮಾತನಾಡುತ್ತಾ, “ನಮ್ಮ ದೇಶವು ಯೋಗ ಸೇರಿದಂತೆ ಹಲವು ಮೂಲ್ಯಾಧಾರಿತ ಕೊಡುಗೆಗಳನ್ನು ಇಡೀ ಜಗತ್ತಿಗೆ ನೀಡಿದೆ. ವೈವಿಧ್ಯತೆಯಲ್ಲಿ ಏಕತೆ ಇರುವುದು ಭಾರತದ ಶಕ್ತಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದಾದ್ಯಂತ ಯೋಗದ ಮಹತ್ವವನ್ನು ತಿಳಿಸಿರುವುದು ಹೆಮ್ಮೆ ಕಾರಕವಾಗಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ ಎಸ್ ಹಿಂಡಸಗಟ್ಟಿ, ಕೆಎಸ್ ಆರ್ ಪಿ ಕಮಾಂಡೆಂಟ್ ಯುವಕುಮಾರ್, ಆರ್ ಎಎಫ್ ಕಮಾಂಡೆಂಡ್ ಪ್ರದೀಪ್, ಡಿಎಚ್‌ಒ ಡಾ. ನಟರಾಜ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಇತರೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು. ಯೋಗಾಪಟುಗಳು ಪಾಲ್ಗೊಂಡಿದ್ದರು.
Read More :ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಹಾಯಧನ – ರೈತರಿಗೆ ಅರ್ಜಿ ಆಹ್ವಾನ
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.