ರಿಪ್ಪನ್‌ಪೇಟೆ ; ಹೆಚ್ಚಿದ ಬೀದಿನಾಯಿ, ಬಿಡಾಡಿ ಜಾನುವಾರುಗಳ ಹಾವಳಿ – ವಾಹನ ಸವಾರರ ಪರದಾಟ !

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ಪ್ರಮುಖ ರಸ್ತೆ ಮತ್ತು ಬಡಾವಣೆ, ಶಾಲೆ, ಮಾಂಸ, ಮೀನು ಮಾರುಕಟ್ಟೆಯ ಬಳಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿ ಪ್ರತಿ ಬಡಾವಣೆಗಳಲ್ಲಿಯೂ ಗುಂಪುಗುಂಪಾಗಿ ಬರುವ ನಾಯಿಗಳ ದ್ವಿಚಕ್ರ ಇತರ ವಾಹನ ಸವಾರರಿಗೆ ಪಾದಚಾರಿಗಳಿಗೆ ಸೈಕಲ್ ಸವಾರರಿಗೆ ದುಸ್ವಪ್ನವಾಗಿ ಪರಿಣಮಿಸಿವೆ.

WhatsApp Group Join Now
Telegram Group Join Now
Instagram Group Join Now

ಸಾರ್ವಜನಿಕರು, ಶಾಲಾ ಮಕ್ಕಳು ಹಗಲು ಹೊತ್ತಲ್ಲೆ ನಿರ್ಭಯದಿಂದ ಓಡಾಡಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಚೌಡೇಶ್ವರಿ ಬೀದಿ ಡೈರಿ ಬಳಿ ಕಸಾಯಿಖಾನೆ ಹತ್ತಿರ ಪ್ರೌಢಶಾಲೆ ಮತ್ತು ಕಾನ್ವೆಂಟ್ ಹಾಗೂ ಸಾಗರ, ಶಿವಮೊಗ್ಗ, ಹೊಸನಗರ, ತೀರ್ಥಹಳ್ಳಿ ಮುಖ್ಯ ರಸ್ತೆಯಲ್ಲಿ, ಸಂತೆ ಮಾರುಕಟ್ಟೆಯಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಕಂಡುಬರುತ್ತಿವೆ.

ಯಾವುದೇ ವಾಹನ ಬಂದರೂ ಅಟ್ಟಿಸಿಕೊಂಡು ಹೋಗುತ್ತಿರುವದರಿಂದ ಅಪಘಾತಗಳು ಸಂಭವಿಸುತ್ತಿವೆ. ದಾರಿ ಹೋಕರ ಮೇಲೂ ಬೀದಿ ನಾಯಿಗಳು ಬಂದು ದಾಳಿ ಮಾಡಿ ಸಮಸ್ಯೆ ಉಂಟು ಮಾಡುತ್ತಿವೆ. ಇದರಿಂದ ವೃದ್ದರು ಮಕ್ಕಳು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ.

ಮುಂಜಾನೆ ಪತ್ರಿಕೆ ವಿತರಕರು ಮನೆ ಮನೆಗೆ ಪೇಪರ್ ವಿತರಣೆ ಮಾಡುವುದೇ ಕಷ್ಟಕರವಾಗಿದೆ. ಇದರೊಂದಿಗೆ ಹಾಲು ವಿತರಣೆಗಾರರು ಮತ್ತು ಶಾಲೆ ಮಕ್ಕಳು ಹೀಗೆ ಈ ಬೀದಿ ನಾಯಿಗಳ ಕಾಟದಿಂದ ಭಯ ಭೀತರಾಗಿದ್ದು ಮನೆಯವರು ಮಕ್ಕಳನ್ನು ಪಕ್ಕದಲ್ಲಿರುವ ಅಂಗಡಿಗೆ ಕಳುಹಿಸಬೇಕಾದರೂ ಹತ್ತಾರು ಬಾರಿ ಯೋಚಿಸಬೇಕಾಗಿದೆ.

ಚೌಡೇಶ್ವರಿ ಬೀದಿ ಮತ್ತು ಬರುವೆ ರಸ್ತೆ, ಸಾಗರ ರಸ್ತೆ, ಮಾಡ್ರನ್ ಮಿಲ್ ಹಿಂಭಾಗ ಜನರು ಸಾಕು ನಾಯಿಗಳನ್ನೂ ಬೀದಿಯಲ್ಲೇ ಬಿಡುತ್ತಾರೆ. ಹೀಗಾಗಿ ಜನರು ರಸ್ತೆಯಲ್ಲಿ ಓಡಾಡಲಾಗದ ಸ್ಥಿತಿ ಇದೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಬರಲು ಕೈಯಲ್ಲಿ ಕೋಲು ಹಿಡಿದು ಓಡಾಡಬೇಕಿದೆ.

ಇನ್ನೂ ಬಿಡಾಡಿ ಜಾನುವಾರುಗಳು ಯಾರಾದರು ಬೇಕರಿ ಹೋಟೆಲ್ ಅಂಗಡಿ ಒಳಗೆ ಬೈಕ್ ಸೈಕಲ್‌ನಲ್ಲಿ ಚೀಲ ಬಾಕ್ಸ್ ಇಟ್ಟು ಹೋದರೆ ಅದನೇ ಕಿತ್ತು ಎಳೆದು ಚೀಲದಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ತಿಂದು ಹಾಕಿರುವ ಸಾಕಷ್ಟು ಉದಾಹರಣೆಗಳು ಕಣ್ಣೇದುರಿಗೆ ನಡೆದು ಹೋಗಿವೆ.

ಇನ್ನೂ ದ್ವಿಚಕ್ರ ವಾಹನಗಳು ಬಂದರೆ ಸಾಕು ನಾಯಿ ಮತ್ತು ಜಾನುವಾರುಗಳು ಅಡ್ಡ ಬಂದು ಅಪಘಾತಗಳು ಸಂಭವಿಸಿವೆ. ಇಲ್ಲಿನ ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಬೀದಿ ನಾಯಿಗಳಿಗೆ ಅಂಗಡಿ ಹೋಟೆಲ್‌ನಿಂದ ಬಿಸ್ಕೇಟ್ ಇನ್ನಿತರ ಆಹಾರವನ್ನು ತಂದು ಹಾಕುವುದರಿಂದಾಗಿ ಬೀದಿನಾಯಿಗಳು ಕೃಷ್ಣಪ್ಪ ಬರುವುದನ್ನೆ ಕಾಯುತ್ತಾ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಾ ವಾಹನ ಸವಾರರು ಜೀವ ಭಯದಿಂದ ಸಂಚರಿಸಬೇಕಾದ ಅನಿರ್ವಾಯತೆ ಎದುರಾಗಿದೆ.

ಇತ್ತೀಚೆಗೆ ಚೌಡೇಶ್ವರಿ ಬೀದಿಯಲ್ಲಿ ಹಾಗೂ ಶಿವಮೊಗ್ಗ, ಸಾಗರ, ಹೊಸನಗರ, ತೀರ್ಥಹಳ್ಳಿ ರಸ್ತೆಯ ಪ್ರೌಢಶಾಲೆ ಬಸವೇಶ್ವರ ಕಾನ್ವೆಂಟ್ ಹಾಗೂ ಸಂತೆ ಮಾರುಕಟ್ಟೆ ಸೇರಿದಂತೆ ವಸತಿ ನಿಲಯ ಬಳಿ ಎಲ್ಲೆಂದರಲ್ಲಿ ಮಲಗಿಕೊಂಡು ಇರುವ ನಾಯಿಗಳು ಶಾಲೆ ಮಕ್ಕಳು ಜನರನ್ನು ಬೆನ್ನಟ್ಟಿಕೊಂಡು ಬರುವುದರೊಂದಿಗೆ ಕಚ್ಚಿದ ಘಟನೆಗಳು ನಡೆದಿದ್ದು ಆಸ್ಪತ್ರೆಯಲ್ಲಿ ನಾಯಿ ಕಡಿತದ ಚುಚ್ಚುಮದ್ದು ಪಡೆಯಲು ಹೋದರೆ ಇಂಜೆಕ್ಷನ್ ಇದ್ದರೂ ಕೊಡಲು ಹಿಂದೆ ಮುಂದೆ ಮಾಡುತ್ತಾರೆ. ಕಾರಣ ಒಂದು ಚುಚ್ಚು ಮದ್ದು ಓಪನ್ ಮಾಡಿದರೆ ಆರು ಜನರಿಗೆ ನೀಡಬೇಕು ಇಲ್ಲದೆ ಹೋದರೆ ನಷ್ಟವಾಗುತ್ತದೆಂದು ಹೇಳಿ ನಾಯಿ ಕಡಿತದಿಂದ ಇಂಜೆಕ್ಷನ್ ಪಡೆಯಲು ಹೋದವರು ಕಾಯುತ್ತಾ ಕುಳಿತುಕೊಳ್ಳು ಬೇಕಾಗಿದೆ.

ಬಿಡಾಡಿ ಜಾನುವಾರುಗಳು ಸಹ ರಸ್ತೆಯ ಮಧ್ಯದಲ್ಲಿ ನಿಂತು ವಾಹನ ಸವಾರರಿಗೆ ತೀವ್ರ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದು ಸಂಬಂಧಪಟ್ಟ ಗ್ರಾಮಾಡಳಿತ ಪೊಲೀಸ್ ಇಲಾಖೆ ಇತ್ತ ಗಮನಹರಿಸಿ ಬೀದಿ ನಾಯಿಗಳ ಮತ್ತು ಬಿಡಾಡಿ ಜಾನುವಾರುಗಳ ಹಾವಳಿಯನ್ನು ತಡೆಯಲು ಮುಂದಾಗುವರೇ ಕಾದುನೋಡಬೇಕಾಗಿದೆ.

Leave a Comment