ರಿಪ್ಪನ್‌ಪೇಟೆ : ಶ್ರಾವಣ ಮಾಸದ ಮೊದಲ ಶುಕ್ರವಾರದಂದು ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಅಭೀಷ್ಠವರ ಪ್ರದಾಯಿನಿ ಯಕ್ಷಿಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜಾ ವಿಧಿಗಳು ಭಕ್ತರ ಪಾಲ್ಗೊಳ್ಳುವಿಕೆಯಿಂದ ಸಾಂಪ್ರದಾಯಿಕವಾಗಿ ನೆರವೇರಿತು. ವಿವಿಧ ಧಾನ್ಯಗಳನ್ನು ಸಮರ್ಪಿಸಿ, ಫಲ ಪುಷ್ಪಗಳ ಅಲಂಕಾರದೊಂದಿಗೆ ಊರ ಪರವೂರ ಭಕ್ತರು ಭಕ್ತಿಭಾವಗಳಿಂದ ಸಂತೃಪ್ತರಾದರು.

ಹೊಂಬುಜ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಸಾನಿಧ್ಯ, ನೇತೃತ್ವ ಮತ್ತು ಉಪಸ್ಥಿತಿಯಲ್ಲಿ ಜಿನಾಗಮೋಕ್ತ ವಿಧಿಯಂತೆ ಪೂಜಾ ವಿಧಾನಗಳು ಜರುಗಿದವು. ಭಕ್ತರು ಸ್ತೋತ್ರಗಳನ್ನು ಪಠಿಸಿದರು.

ಸ್ವಸ್ತಿಶ್ರೀಗಳವರು “ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಭಕ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ತಮ್ಮ ಸಂಕಲ್ಪವು ಫಲ ನೀಡಲೆಂದು ಪ್ರಾರ್ಥಿಸುತ್ತಾರೆ. ಭಕ್ತರ ಸಂಕಲ್ಪ ಈಡೇರಲೆಂದು ಶ್ರೀ ಪದ್ಮಾವತಿ ದೇವಿ ಸದಾ ಹರಸುತ್ತಿರಲಿ” ಎಂದು ಪ್ರವಚನದಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾತಃ ಕಾಲದಲ್ಲಿ ಶ್ರೀ ನೇಮಿನಾಥ ಸ್ವಾಮಿ, ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಶ್ರೀ ಸರಸ್ವತಿ ದೇವಿ ಹಾಗೂ ಕೂಷ್ಮಾಂಡಿನಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗ ಸನ್ನಿಧಿಯಲ್ಲಿ ಪೂಜೆಗಳು ನೆರವೇರಿದವು. ಅಭೀಷ್ಠ ಪ್ರಸಾಧ ಭವನದಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ, ವಸತಿ ಗೃಹಗಳಲ್ಲಿ ಪರವೂರ ಭಕ್ತರಿಗೆ ವಸತಿ ಸೌಲಭ್ಯ ಶಿಸ್ತುಬದ್ಧವಾಗಿತ್ತು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.