ಬಾಳೆಹೊನ್ನೂರು ; ಕಾಡಾನೆ ಉಪಟಳ ನಿಯಂತ್ರಣಕ್ಕೆ ಒತ್ತಾಯಿಸಿ ಬಾಳೆಹೊನ್ನೂರು, ಖಾಂಡ್ಯದಲ್ಲಿ ಸ್ಥಳೀಯರು ಸೋಮವಾರ ಸ್ವಯಂ ಪ್ರೇರಿತ ಬಂದ್ ನಡೆಸುತ್ತಿದ್ದು, ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ.
ಬಾಳೆಹೊನ್ನೂರು, ಖಾಂಡ್ಯ, ಹುಯಿಗೇರೆ, ದೇವದಾನ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಲಾಯಿತು.
ಮಲೆನಾಡು ಹಿತರಕ್ಷಣಾ ಸಮಿತಿ, ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ, ಮಲೆನಾಡು ಅಡಿಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಾಳೆಹೊನ್ನೂರಿನಲ್ಲಿ ಶಾಲಾ- ಕಾಲೇಜುಗಳನ್ನು ಸ್ಥಳೀಯರು ಬಂದ್ ಮಾಡಿಸಿದ್ದಾರೆ. ವಾಹನ ಸಂಚಾರ ಸಂಚಾರವನ್ನೂ ಬಂದ್ ಮಾಡಲಾಗಿದೆ. ಇದರಿಂದ ಚಿಕ್ಕಮಗಳೂರಿನಿಂದ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಸಾಲುಗಟ್ಟಿ ನಿಂತಿದ್ದವು.

ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಕೂಡಲೇ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರು.
ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ದು, ‘ಹುಯಿಗೇರೆ, ದೇವದಾನ, ಅಂಡವಾನಿ, ಬನ್ನೂರು ಕಸ್ಕೆಮನೆ, ನೇಮನಹಳ್ಳಿ, ಹಲಸೂರು ಸುತ್ತಮುತ್ತ ಪ್ರದೇಶಗಳಲ್ಲಿ ಕಾಡಾನೆಗಳು ಸಂಚರಿಸುತ್ತಿವೆ. ಇಬ್ಬರ ಸಾವಿಗೆ ಕಾರಣವಾಗಿರುವ ಎರಡು ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದು, ಅದರಂತೆ ಎಚ್ಚೆತ್ತ ಸರಕಾರ ಕಾಡಾನೆ ಸೆರೆಗೆ ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಬಿಡಾರದಿಂದ ನಾಲ್ಕು ಕುಮ್ಕಿ ಆನೆಗಳು ಬಾಳೆಹೊನ್ನೂರಿಗೆ ಆಗಮಿಸಿದ್ದು ಇದರ ಬೆನ್ನಲ್ಲೇ ಕೊಡಗು, ಮೈಸೂರು, ಶಿವಮೊಗ್ಗದಿಂದ ವೈದ್ಯರ ತಂಡ ಕೂಡ ಬಾಳೆಹೊನ್ನೂರಿನತ್ತ ಆಗಮಿಸಿದೆ.
ಇಂದಿನಿಂದಲೇ ಕಾರ್ಯಾಚರಣೆ:
ಇನ್ನು ಘಟನೆ ಕುರಿತು ಮಾಹಿತಿ ನೀಡಿದ ಡಿಸಿ-ಡಿ.ಎಫ್.ಓ ಕಾಡಾನೆ ಸೆರೆಗೆ ಈ ಕೂಡಲೇ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ, ಅಲ್ಲದೆ ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ, ಇಟಿಎಫ್ ಸಿಬ್ಬಂದಿ ಕೂಡ ಸನ್ನದ್ಧರಾಗಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.