ಹೊಸನಗರ ; ಯಾರೋ ಅಪರಿಚಿತರು ಕುಡಿಯುವ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಕೀಟನಾಶಕ ಬೆರೆಸಿದ್ದು, ಸಕಾಲದಲ್ಲಿ ಶಿಕ್ಷಕರು ಅಗತ್ಯ ಜಾಗೃತಿ ವಹಿಸಿದ ಪರಿಣಾಮ ಸಂಭವನೀಯ ಭಾರೀ ದುರ್ಘಟನೆಯೊಂದು ತಪ್ಪಿದಂತಾಗಿದೆ.
ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಶಾಲೆಯ ಮೇಲ್ಭಾಗದಲ್ಲಿ ಎರಡು ಪ್ಲಾಸ್ಟಿಕ್ ಸಿಂಟೆಕ್ಸ್ ನೀರಿನ ಟ್ಯಾಂಕ್ ಅಳವಡಿಸಲಾಗಿತ್ತು. ಯಾರೋ ಅಪರಿಚಿತ ದುಷ್ಕರ್ಮಿಗಳು ಕಡಿಮೆ ನೀರು ಸಂಗ್ರಹವಾಗಿದ್ದ ಒಂದು ಟ್ಯಾಂಕ್‌ಗೆ ವಿಷ ಬೆರೆಸಿದ್ದಾರೆ.
ಇಂದು ಶಾಲೆ ಆರಂಭಗೊಂಡ ಬಳಿಕ ಬಿಸಿಯೂಟ ಸಿಬ್ಬಂದಿಗಳು ಆಹಾರ ತಯಾರಿ ನಡೆಸಿದ್ದರು. ಇದೇ ವೇಳೆ ಕೆಲವು ಮಕ್ಕಳು ವಿಷ ಬೆರೆಸಿದ್ದ ಟ್ಯಾಂಕ್ ಮೂಲಕ ಹಾದು ಬರುವ ನಳದಲ್ಲಿ ಕೈ-ಕಾಲು ತೊಳೆಯಲು ಮುಂದಾಗಿದ್ದು, ಕೆಟ್ಟ ವಾಸನೆ ಬರುತ್ತಿರುವುದಾಗಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಾಗೃತರಾದ ಶಾಲಾ ಸಿಬ್ಬಂದಿ ವರ್ಗ, ಹಿರಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ತತಕ್ಷಣ ತಹಸೀಲ್ದಾರ್ ರಶ್ಮಿ ಹಾಲೇಶ್, ಬಿಇಒ ಚೇತನ, ತಾಲೂಕು ಪಂಚಾಯತಿ ಇಒ ನರೇಂದ್ರ ಕುಮಾರ್, ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಶಂಕರ್ ಪಾಟೀಲ್, ಕಾನ್ಸ್‌ಟೇಬಲ್ ಗೋಪಾಲಕೃಷ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಇಂದ್ರೇಶ್, ಸೇರಿದಂತೆ ಶಿಕ್ಷಣ ಇಲಾಖೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಶಾಲೆಗೆ ರಜೆ ;
ಸ್ಥಳದಲ್ಲಿ ಹಲವು ಪ್ಲಾಸ್ಟಿಕ್ ಬಾಟಲ್ ಲಭ್ಯವಾಗಿದ್ದು, ಬಿಇಒ ಶಾಲೆಗೆ ಇಂದು ಹಾಗು ನಾಳೆ ರಜೆ ಘೋಷಿಸಿದ್ದಾರೆ. ಈ ಶಾಲೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 18 ವಿದ್ಯಾರ್ಥಿಗಳು ದಾಖಲಾಗಿದ್ದು, ಘಟನೆ ನಡೆದ ವೇಳೆ 17 ವಿದ್ಯಾರ್ಥಿಗಳು ಶಾಲೆಯಲ್ಲಿ ಹಾಜರಾಗಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.