ಹೊಸನಗರ ; ತಾಲೂಕಿನ ಬಿದನೂರಿನ(ನಗರ) ಕಲ್ಮಠದ ಆವರಣದಲ್ಲಿನ ಕೆಳದಿ ಸಾಮ್ರಾಜ್ಯದ ಶರಣೆ ವೀರರಾಣಿ ಚೆನ್ನಮ್ಮ ಅವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಣಿ ಚೆನ್ನಮ್ಮ ಅವರ 328ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ(ರಿ) ವತಿಯಿಂದ ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು.
ಈ ವೇಳೆ ವೇದಿಕೆ ನಿರ್ದೇಶಕ, ಇತಿಹಾಸಕಾರ ನಗರ ಸುಧೀಂದ್ರ ಭಂಡಾರ್ಕರ್ ಮಾತನಾಡಿ, ರಾಣಿ ಚೆನ್ನಮ್ಮ ಅವರು, ಸದ್ಗುಣ ಶೀಲೆ, ವಿನಯವಂತೆ, ಧರ್ಮನಿಷ್ಠೆ ಹಾಗೂ ಉತ್ತಮ ಆಡಳಿತಾತ್ಮಕ ಚತುರೆ ಆಗಿದ್ದಳು ಎಂದು ಇತಿಹಾಸ ತಿಳಿಸಿದರೆ, ಈಕೆ ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಕಿತ್ತೂರು ಚೆನ್ನಮ್ಮರ ಪ್ರತಿರೂಪ ಎಂಬಂತೆ ಇತಿಹಾಸ ಬಿಂಬಿಸಿದೆ ಎಂದರು.
ಕೆಳದಿ ದೊರೆ ಸೋಮಶೇಖರ ನಾಯಕನ ಪಟ್ಟದರಸಿಯಾಗಿದ್ದ ಈಕೆ, ಕೋಟಿಪುರದ ಸಿದ್ದಪ್ಪ ಶೆಟ್ಟಿ ಮತ್ತು ಪಾರ್ವತಮ್ಮ ಅವರ ಮುದ್ದಿನ ಪುತ್ರಿ. ಮೊಘಲ್ ಚಕ್ರವರ್ತಿ ಔರಂಗಜೇಬನ ಬಲಿಷ್ಠ ಸೈನ್ಯವನ್ನು ಸೋಲಿಸಿದ ಕೀರ್ತಿ ಪಡೆದ ಈಕೆ, ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ರಾಜರಾಮನಿಗೆ ಆಶ್ರಯ ನೀಡಿ ಜೀವದಾನ ನೀಡಿದ ಮಾತೃ ಹೃದಯವಂತೆ. ಬಿದನೂರು ನಗರದಿಂದ ಇಡೀ ಕೆಳದಿ ಸಾಮ್ರಾಜ್ಯವನ್ನು ಸುಮಾರು 25 ವರ್ಷ 4 ತಿಂಗಳು 20 ದಿನಗಳ ಕಾಲ ಸುಧೀರ್ಘಕಾಲ ಆಳಿದ ಹೆಗ್ಗಳಿಕೆ ಈಕೆಗೆ ಸಲ್ಲುತ್ತದೆ. ಬೆಟ್ಟದ ಮೇಲೊಂದು ಬಲಿಷ್ಠ ಕೋಟೆಯನ್ನು ಕಟ್ಟುವ ಮೂಲಕ ಚನ್ನಗಿರಿ ಎಂಬ ನಗರ ನಿರ್ಮಾಣಕ್ಕೆ ಕಾರಣೀಭೂತಳಾದ ಇಂತಹ ಅಪ್ರತಿಮ ಹೋರಾಟಗಾತಿ, ವೀರಶೈವ ರಾಣಿ ಚೆನ್ನಮ್ಮಳ ಇತಿಹಾಸವನ್ನು ಸಂರಕ್ಷಿಸಿ ಹೊಸ ಬೆಳಕು ಚೆಲ್ಲುವ ಕಾರ್ಯಕ್ಕೆ ಸರ್ಕಾರ ಮುಂದಾಗ ಬೇಕಿದೆ ಅಲ್ಲದೆ, ರಾಣಿ ಚೆನ್ನಮ್ಮ ಪುಣ್ಯಸ್ಮರಣೆಯನ್ನು ಸರಕಾರಿ ಕಾರ್ಯಕ್ರಮವಾಗಿ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ವಿನಂತಿಸಿದರು.
ಈ ವೇಳೆ ಕೆಳದಿ ರಾಜ ವಂಶಸ್ಥರಾದ ಚಂದ್ರಕಾಂತ ಸಂಗಣೇಕರ್, ವಿನಯ್ ಹುಣಸಿನಕಟ್ಟೆ, ವಿರೂಪಾಕ್ಷಪ್ಪ, ಬಾಂಡ್ಯ ಕಲ್ಯಾಣ್ ಕುಮಾರ್ ಸೇರಿದಂತೆ ಸಾಗರದ ಖ್ಯಾತ ವಕೀಲ ಪ್ರವೀಣ್, ಹರ್ಷ, ಶಶಿಗೌಡ, ರಾಜುಗೌಡ ಹೊಸಬಾಳೆ, ಗುರುನಾಥ ಬಾಳೆಕೊಪ್ಪ, ಅನಿಲ್ ಬರದಹಳ್ಳಿ, ಅಮೃತರಾಜ್, ಅಭಿಷೇಕ್ ಅದರಂತೆ, ವಿನಾಯಕ ವಾರಂಬಳ್ಳಿ, ಪತ್ರಕರ್ತ ಹೊಸನಗರ ಶ್ರೀಕಂಠ ಇದ್ದರು

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.