79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ; ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ ಸಚಿವ ಮಧು ಬಂಗಾರಪ್ಪ

Written by Koushik G K

Published on:

ಶಿವಮೊಗ್ಗ: ಜಿಲ್ಲೆಯ ಇತಿಹಾಸವು ಅನೇಕ ಸ್ವಾತಂತ್ರ್ಯ ಹೋರಾಟಗಾರರ ಹೋರಾಟ, ತ್ಯಾಗ ಮತ್ತು ಬಲಿದಾನದ ಕಥೆಗಳನ್ನು ಹೊತ್ತಿದೆ. ವಿಶೇಷವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಈಸೂರಿನ ಹೋರಾಟಗಾರರ ಸ್ಮರಣೆ, ಜನಮನದಲ್ಲಿ ಸದಾ ಅಚ್ಚಳಿಯದೆ ಉಳಿಯಲಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಧು ಬಂಗಾರಪ್ಪ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಗರದ ನೆಹರು ಕ್ರೀಡಾಂಗಣದಲ್ಲಿ, ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಜಿಲ್ಲೆ ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದೆ. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಶಾಂತವೇರಿ ಗೋಪಾಲಗೌಡರಂತಹ ಗಣ್ಯರು ಜನಿಸಿದ ಪವಿತ್ರ ಭೂಮಿ ಇದು” ಎಂದು ಹೆಮ್ಮೆಪಟ್ಟರು.

ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಜನರ ಜೀವನದಲ್ಲಿ ನೇರ ಬದಲಾವಣೆ ತಂದುಕೊಟ್ಟಿವೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 3.87 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ₹1,567.74 ಕೋಟಿಯನ್ನು ನೇರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಶಕ್ತಿ ಯೋಜನೆ ಅಡಿಯಲ್ಲಿ 6.32 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಲಾಭ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆ ಮೂಲಕ 3.52 ಲಕ್ಷ ಪಡಿತರ ಕಾರ್ಡ್‌ದಾರರಿಗೆ ₹359.97 ಕೋಟಿಯ ನೆರವು ತಲುಪಿದೆ.

ಗೃಹ ಜ್ಯೋತಿ ಯೋಜನೆಯಿಂದ 4.69 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ವಿದ್ಯುತ್ ಸಬ್ಸಿಡಿಗೆ ಸರ್ಕಾರ ₹481.04 ಕೋಟಿ ವೆಚ್ಚ ಮಾಡಿದೆ. ಯುವನಿಧಿ ಯೋಜನೆ ಅಡಿಯಲ್ಲಿ 6,894 ವಿದ್ಯಾರ್ಥಿಗಳಿಗೆ ₹17.88 ಕೋಟಿಯನ್ನು ಜಮಾ ಮಾಡಲಾಗಿದೆ.

ಈ ವರ್ಷ ಸಮೃದ್ಧ ಮಳೆಯಿಂದಾಗಿ ಕೆರೆ, ಕಾಲುವೆಗಳಲ್ಲಿ ನೀರು ತುಂಬಿ ಕೃಷಿ ಚಟುವಟಿಕೆಗಳಿಗೆ ಉತ್ತಮ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಗೆ ಹೊಸದಾಗಿ 5 ಪಶು ಚಿಕಿತ್ಸಾಲಯ ಕಟ್ಟಡಗಳ ಅನುಮೋದನೆ ದೊರೆತಿದೆ. ಮತ್ಸ್ಯ ಸಂಜೀವಿನಿ ಯೋಜನೆ ಮೂಲಕ ಮಹಿಳಾ ಮೀನುಗಾರರಿಗೆ ಉಚಿತ ಮೀನು ಮರಿ ಹಾಗೂ ಆಹಾರ ವಿತರಿಸಲಾಗಿದೆ.

ಅಮೃತ್ ಯೋಜನೆ ಅಡಿಯಲ್ಲಿ ಹಲವು ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಕಾರ್ಯಕ್ಕೆ ಚಾಲನೆ ಸಿಗಲಿದೆ. ಸೊರಬ ಮತ್ತು ಭದ್ರಾವತಿ ಕ್ಷೇತ್ರಗಳಿಗೆ ₹307.80 ಕೋಟಿ ಮೌಲ್ಯದ ನೂತನ ನೀರಾವರಿ ಯೋಜನೆ ಮಂಜೂರಾಗಿದೆ. ಕುಂಸಿ–ಗಾಜನೂರು ಬಹುಗ್ರಾಮ ನೀರು ಯೋಜನೆಗೆ ₹125 ಕೋಟಿ ಅನುಮೋದನೆ ದೊರೆತು ಕಾಮಗಾರಿ ಪ್ರಗತಿಯಲ್ಲಿದೆ.

ಶಿಕ್ಷಣ ಕ್ಷೇತ್ರದಲ್ಲಿ, ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯದಲ್ಲಿ 4ನೇ ಸ್ಥಾನ ಪಡೆದು ಮೆಚ್ಚುಗೆಗೆ ಪಾತ್ರವಾಗಿದೆ. ಮೂರು ಪರೀಕ್ಷಾ ನೀತಿ ಜಾರಿಗೊಂಡಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ 5,000 ಸರ್ಕಾರಿ ಶಾಲೆಗಳಲ್ಲಿ ಎಲ್‌ಜಿ ಹಾಗೂ ಯುಕೆಜಿ ತರಗತಿಗಳು, 4,000 ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳು ಪ್ರಾರಂಭವಾಗುತ್ತಿವೆ.

ಶಿಕ್ಷಕರ ನೇಮಕಾತಿ, ಉಚಿತ NEET/JEE/CET ತರಬೇತಿ, ಮತ್ತು ಕೆ.ಪಿ.ಎಸ್. ಶಾಲೆಗಳ ವಿಸ್ತರಣೆ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕೈಗೊಂಡ ಪ್ರಮುಖ ಹೆಜ್ಜೆಗಳು. ಬಿಸಿ ಊಟ ಯೋಜನೆ, ಮೊಟ್ಟೆ ಮತ್ತು ರಾಗಿ ಮಾಲ್ಟ್ ವಿತರಣೆ, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಶೇ.100ರಷ್ಟು ಪ್ರಗತಿ ಸಾಧಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ, “ಅಂಧತ್ವ ಮುಕ್ತ ಶಿವಮೊಗ್ಗ” ಅಭಿಯಾನ ಪ್ರಾರಂಭಗೊಂಡಿದೆ. ಮೆಗ್ಗಾನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸುವ ಕೆಲಸ ಪ್ರಗತಿಯಲ್ಲಿದೆ. ಕ್ಯಾನ್ಸರ್ ಚಿಕಿತ್ಸೆಗೆ ಕಿದ್ವಾಯಿ ಮಾದರಿಯ ಆಸ್ಪತ್ರೆ ನಿರ್ಮಾಣ, ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡ ಕಾಮಗಾರಿಗಳು ಕೂಡ ನಡೆಯುತ್ತಿವೆ.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ಹಂತ-2 ಅಡಿಯಲ್ಲಿ ₹117.50 ಕೋಟಿ ಮಂಜೂರಾಗಿದೆ. ಪಿಎಂಜಿಎಸ್‌ವೈ ಅಡಿಯಲ್ಲಿ 162 ಕಿಮೀ ರಸ್ತೆ ಅಭಿವೃದ್ಧಿಗೆ ₹118.08 ಕೋಟಿ ಅನುಮೋದಿಸಲಾಗಿದೆ. ದಶಕಗಳಿಂದ ಬಾಕಿ ಇದ್ದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

ಕಾರ್ಮಿಕ ಕಲ್ಯಾಣಕ್ಕಾಗಿ ಸ್ಮಾರ್ಟ್ ಕಾರ್ಡ್, ನೂತನ ಸಮುದಾಯ ಭವನ, ವಸತಿ ಶಾಲೆ ನಿರ್ಮಾಣ ಹೀಗೆ ಹಲವು ಕ್ರಮಗಳು ಕೈಗೆತ್ತಿಕೊಳ್ಳಲಾಗಿದೆ. ಪ್ರವಾಸೋದ್ಯಮ ವೃದ್ಧಿಗಾಗಿ ಜೋಗದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೆ ಸಿಗಲಿದೆ.

ಕಾರ್ಯಕ್ರಮದ ಅಂಗವಾಗಿ ಬಾಲ್ಯ ವಿವಾಹ ತಡೆಯ ಪ್ರತಿಜ್ಞಾ ವಿಧಿ ನೆರವೇರಿಸಲಾಯಿತು. 21 ಕವಾಯಿತು ತಂಡಗಳು ಶಿಸ್ತಿನ ಪಥ ಸಂಚಲನ ನಡೆಸಿದರೆ, ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳು ಮತ್ತು ನೃತ್ಯ ಪ್ರದರ್ಶನ ಎಲ್ಲರ ಮನಗೆದ್ದವು. ಶ್ರೇಷ್ಠ ಸಾಧನೆ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಗೃಹರಕ್ಷಕರು ಹಾಗೂ ಪಥ ಸಂಚಲನ ತಂಡಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾವಿರಾರು ಜನರು ಹಾಜರಿದ್ದರು.

Leave a Comment