Adike:ಕರ್ನಾಟಕದ ಅಡಿಕೆ ಬೆಳೆಗಾರರು ಈಗ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಸಂಸದರ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ, ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.
ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಈ ಹಿಂದೆ ಅಡಿಕೆ ಸಂಬಂಧಿತವಾಗಿ ರಾಜ್ಯ ಸರ್ಕಾರ ಹಾಗೂ ವಿವಿಧ ಸಂಸ್ಥೆಗಳು ಸಲ್ಲಿಸಿದ್ದ ವರದಿಗಳನ್ನು ತ್ವರಿತವಾಗಿ ಪರಿಶೀಲಿಸಿ ಇತ್ಯರ್ಥಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಡಿಕೆ ಬೆಳೆಗಾರರು ಎದುರಿಸುತ್ತಿರುವ ತೊಂದರೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಸಲುವಾಗಿ ಶೀಘ್ರದಲ್ಲೇ ವಿಜ್ಞಾನಿಗಳ ತಂಡವನ್ನು ತೊಂದರೆಗೊಳಗಾದ ಜಿಲ್ಲೆಗಳಿಗೆ ಕಳುಹಿಸುವುದಾಗಿ ಸಚಿವರು ಭರವಸೆ ನೀಡಿದರು.
ವಿದೇಶಿ ಆಮದು ಕಡಿವಾಣ ಹಾಕಲು ಮನವಿ
ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿರುವುದು, ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದು ಆಗುತ್ತಿರುವುದು, ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿದೆ.ಸಂಸದರು ಅಡಿಕೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿರುವ ದರ, ಬೆಳೆಯ ಉತ್ಪಾದನಾ ವೆಚ್ಚ ಏರಿಕೆ ಹಾಗೂ ವಿದೇಶಿ ಆಮದುಗಳ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿರುವುದನ್ನು ಸಚಿವರ ಗಮನಕ್ಕೆ ತಂದರು.ಅಕ್ರಮ ಆಮದು ನಿಯಂತ್ರಿಸಲು ಗಡಿ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವೂ ಕೇಂದ್ರದ ಸಹಯೋಗದಿಂದ ರೈತರ ಹಿತ ಕಾಯುವ ಕೆಲಸ ಮಾಡಬೇಕೆಂದು ಅವರು ಒತ್ತಾಯಿಸಿದರು.
ಈ ಸಭೆಯಲ್ಲಿ ಮಾನ್ಯ ಕೇಂದ್ರ ಕೈಗಾರಿಕಾ ಹಾಗೂ ಉಕ್ಕು ಖಾತೆಯ ಸಚಿವರು ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರು ಪ್ರಹ್ಲಾದ ಜೋಶಿ, ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರು ಸೋಮಣ್ಣ,ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ, ಆರಗ ಜ್ಞಾನೇಂದ್ರ, ಶಾಸಕರು ಹಾಗೂ ಮಾಜಿ ಸಚಿವರು ಮತ್ತು ಸಂಸದರಾದ ವಿಶ್ವೇಶ್ವರಯ್ಯ ಕಾಗೇರಿ, ಗೋವಿಂದ ಕಾರಜೋಳ, ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಯದುವೀರ್ ಒಡೆಯರ್ ಮತ್ತು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ ಹಾಗೂ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕೊಡ್ಗಿ ಮತ್ತಿತರ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಿದ್ದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650