ಹೊಸನಗರ ; ಶಿಕ್ಷಣದಿಂದ ಮಾತ್ರವೇ ಸುಸ್ಥಿರ, ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ. ಇದು ಸಮಾಜದಲ್ಲಿನ ಅಸಮಾನತೆ ನಿರ್ಮೂಲನೆಗೆ ಬಲಿಷ್ಟ ಆಸ್ತ್ರವಾಗಿದೆ ಎಂದು ಮನಗಂಡಿದ್ದ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಆದರ್ಶಗಳು ಸರ್ವಕಾಲಕ್ಕೂ ಅನುಕರಣೀಯ ಎಂದು ಆದಿಜಾಂಬವ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ರಾಜ್ಯಾಧ್ಯಕ್ಷ ಎನ್. ಪ್ರಕಾಶ್ ತಿಳಿಸಿದರು.
ಸಂಸ್ಥೆಯ 25ನೇ ವರ್ಷಆಚರಣೆ ಪ್ರಯುಕ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ, 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗು ಇಂಜಿನಿಯರ್ಸ್ ಡೇ ಅಂಗವಾಗಿ ತಾಲೂಕಿನ ಮುಂಬಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಸಗುಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಲಿಕೋಪಕರಣ ಖರೀದಿಗೆ ಧನ ಸಹಾಯದ ಚೆಕ್ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಗಳಿಗೆ ಸಂಸ್ಥೆಯು ಅನೇಕ ರೀತಿಯ ಸಹಾಯ ಹಸ್ತ ನೀಡಿದ್ದು, ಇದು ಮುಂದೆಯೂ ಮುಂದುವರಿಯಲಿದೆ. ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ನಿರತರಾಗಿರುವ ಇಂತಹ ಪ್ರದೇಶಗಳಲ್ಲಿ ದಾನಿಗಳು ಹೆಚ್ಚೆಚ್ಚು ಸಹಕರಿಸಿದಲ್ಲಿ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೇರಣೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿಯ ಗೌರವಾಧ್ಯಕ್ಷ ದೇವೇಂದ್ರಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕೆಂಚಮ್ಮ ರಮೇಶ್, ಸದಸ್ಯ ಜಯಣ್ಣ ಸೇರಿದಂತೆ ಪೋಷಕ ವೃಂದ ಹಾಜರಿದ್ದರು. ಮುಖ್ಯ ಶಿಕ್ಷಕ ಡಿ.ಮಂಜಪ್ಪ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಮೀರಾಬಾಯಿ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.