ಶ್ರದ್ಧಾ ಭಕ್ತಿಯಿಂದ ಅಭ್ಯಂಜನ ಸ್ನಾನದೊಂದಿಗೆ ನರಕ ಚತುರ್ದಶಿ ಸಂಭ್ರಮಾಚರಣೆ

0 625

ರಿಪ್ಪನ್‌ಪೇಟೆ: ನರಕ ಚತುರ್ದಶಿಯ ಅಂಗವಾಗಿ ಇಂದು ಮಹಿಳೆಯರು ಮನೆಯ ಬಳಿಯಲ್ಲಿ ತೆರೆದ ಬಾವಿಯ ಸುತ್ತ ಸಗಣಿ ನೀರಿನಿಂದ ಶುದ್ದಿಕರಿಸಿ ಮಾವಿನ ತೋರಣ ಮತ್ತು ಜೇಡಿ, ಕೆಮ್ಮಣ್ಣು, ರಂಗೋಲಿಗಳಿಂದ ಶೃಂಗರಿಸಿ ಪೂಜೆಗೆ ಅಣಿಗೊಳಿಸಿಕೊಂಡು ಮುಂಜಾನೆ ಮುತ್ತೈದೆಯವರು ಮಣ್ಣಿನ ಕುಂಭದೊಂದಿಗೆ ಪೂಜಾ ಸಾಮಗ್ರಿಯನ್ನು ಹಿಡಿದುಕೊಂಡು ಬಂದು ಗಂಗಾಮಾತೆಯನ್ನು ಪೂಜಿಸಿ ನೈವೇದ್ಯ ಮಾಡಿ ನೀರು ತುಂಬಿಕೊಂಡು ಮನೆಯಲ್ಲಿನ ದೇವರ ಗುಡಿಯಲ್ಲಿಟ್ಟು ಪೂಜಿಸಿ ಶ್ರದ್ದಾ ಭಕ್ತಿಯಿಂದ ಅಭ್ಯಂಜನ ಸ್ನಾನ ಮಾಡುವುದರೊಂದಿಗೆ ನರಕ ಚತುರ್ದಶಿ ಹಬ್ಬವನ್ನು ಸಂಭ್ರಮಿಸಿದರು.

ಮಣ್ಣಿನ ಕುಂಭವನ್ನು ಮಾವಿನ ತೋರಣ ಹೂವಿನ ಅಲಂಕಾರದೊಂದಿಗೆ ಶೃಂಗರಿಸಿ ಬಂಗಾರದ ಆಭರಣವನ್ನಿಟ್ಟು ನರಕ ಚತುರ್ದಶಿಯ ದಿನ ಸುಮಂಗಳೆಯರು ಬಾವಿಯ ಬಳಿ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಅರಿಶಿಣ ಕುಂಕುಮದೊಂದಿಗೆ ಬಾಗಿನ ನೀಡಿ ಹಿರಿಯರಿಂದ ಆಶೀರ್ವಾದ ಪಡೆಯುತ್ತಾರೆ.

ನಂತರ ತಮ್ಮ ಸ್ನಾನದ ಮನೆಯಲ್ಲಿನ ನೀರಿನ ಹಂಡೆಗೆ ಹಿಡ್ಲಚ್ಚಿ ಮತ್ತು ಮಹಾಲಿಂಗನ ಬಳ್ಳಿಯಿಂದ ಅಲಂಕರಿಸಿ ಅದರಲ್ಲಿ ಮುಂಜಾನೆ ಬಾವಿಯಿಂದ ತಂದ ನೀರನ್ನು ಹಾಕಿ ಅಭ್ಯಂಜನ ಸ್ನಾನ ಮಾಡುವುದು ಪಾರಂಪರಿಕವಾಗಿ ಬೆಳೆದು ಬಂದ ಪದ್ದತಿಯಾಗಿದ್ದು ಮಕ್ಕಳು, ಹಿರಿಯರು ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಬಿಸಿಬಿಸಿ ನೀರಿನ ಸ್ನಾನ ಮಾಡಿ ನಂತರ ಕೊಟ್ಟೆ ಕಡಬು ಮತ್ತು ಚೀನಿಕಾಯಿ (ಸಿಹಿಕುಂಬಳ) ಕಡಬು ಅಥವಾ ಸೌತೆಕಾಯಿ ಕಡುಬನ್ನು ತಿಂದು ಸಂಭ್ರಮಿಸುವುದು ಈ ಹಬ್ಬದ ವಿಶೇಷವಾಗಿದೆ ಎಂದು ಹಿರಿಯರಾದ ಎಂ.ಡಿ.ಇಂದ್ರಮ್ಮ, ದ್ರಾಕ್ಷಾಯಣಮ್ಮ ಬೈರಾಪುರ, ಡಿ.ಎಸ್.ಸುಶೀಲಮ್ಮ ದೊಡ್ಡಿನಕೊಪ್ಪ, ಮೀನಾಕ್ಷಮ್ಮ ಗವಟೂರು, ತಮ್ಮ ಹಬ್ಬದ ಅನುಭವವನ್ನು ಮಾಧ್ಯಮದವರ ಬಳಿ ಹಂಚಿಕೊಂಡರು.

Leave A Reply

Your email address will not be published.