ಕಾಳುಮೆಣಸಿನ ಸುಧಾರಿತ ಬೇಸಾಯ ಕ್ರಮಗಳು ; ತರಬೇತಿ

0 68

ತೀರ್ಥಹಳ್ಳಿ : ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಮಿಶ್ರಬೆಳೆಯಾಗಿ ಕಾಳು ಮೆಣಸು ಬೆಳೆಯುವ ಬಗ್ಗೆ ಒಲವು ತೋರುತ್ತಿದ್ದು ಈ ಬೆಳೆಯ ಕುರಿತಾದ ತರಬೇತಿ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ ಎಂದು ತೀರ್ಥಹಳ್ಳಿಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ. ಎಂ.ರವಿಕುಮಾರ್ ತಿಳಿಸಿದರು.

ತೀರ್ಥಹಳ್ಳಿಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಜ. 05 ರಂದು “ಕಾಳು ಮೆಣಸಿನ ಸುಧಾರಿತ ಬೇಸಾಯ ಕ್ರಮಗಳು” ಕುರಿತು ರೈತರಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಲೆನಾಡಿನ ಕಾಳು ಮೆಣಸಿನ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳ ಕುರಿತು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ವಿಭಾಗದ ವಿಜ್ಞಾನಿಯಾದ ಡಾ. ಆರ್. ಗಿರೀಶ್ ಇವರು ಮಾತನಾಡಿ, ಕಾಳು ಮೆಣಸಿನ ವಿವಿಧ ತಳಿಗಳ ಪರಿಚಯ ಮಾಡಿಕೊಟ್ಟು, ಮಲೆನಾಡಿಗೆ ಸೂಕ್ತವಾದ ಕಾಳು ಮೆಣಸಿನ ತಳಿಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಕಾಳು ಮೆಣಸಿನ ಕೃಷಿಯಲ್ಲಿ ತೋಟದ ಮಣ್ಣಿನ ರಸಸಾರ ತಟಸ್ಥವಾಗಿರುವುದು, ಸಮರ್ಪಕ ಪೋಷಕಾಂಶಗಳ ಪೂರೈಕೆ ಮಾಡುವುದು ಅತ್ಯಗತ್ಯ. ಸುಧಾರಿತ ಕ್ರಮಗಳ ಅಳವಡಿಕೆಯಿಂದ ಕಾಳು ಮೆಣಸಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದರು.

ಸಾವಯವ ಗೊಬ್ಬರವನ್ನು ಒದಗಿಸುವ ಮುನ್ನ ಟ್ರೈಕೋಡರ್ಮ, ಸೂಡೋಮೋನಾಸ್, ಬ್ಯಾಸಿಲಸ್ ಮುಂತಾದ ಸೂಕ್ಷ್ಮಾಣು ಜೀವಿಗಳಿಂದ ಉಪಚರಿಸಿ ನಂತರ ಬಳ್ಳಿಗಳಿಗೆ ಕೊಡಬೇಕು. ಶೀಘ್ರ ಸೊರಗುರೋಗದ ನಿರ್ವಹಣೆಗೆ ಬೋರ್ಡೋ ದ್ರಾವಣವನ್ನು ಸರಿಯಾದ ಕ್ರಮದಲ್ಲಿ ತಯಾರಿಸಬೇಕು. ಬೋರ್ಡೋ ದ್ರಾವಣದ ರಸಸಾರ ಕಡಿಮೆಯಾದರೆ ಎಲೆಗಳನ್ನು ಸುಡುತ್ತದೆ ಹಾಗೆಯೇ ರಸಸಾರ ಹೆಚ್ಚಾದರೆ ಬೋರ್ಡೋ ದ್ರಾವಣವು ರೋಗಾಣುವಿನ ಮೇಲೆ ಪ್ರಭಾವ ಬೀರುವುದಿಲ್ಲ, ಹಾಗಾಗಿ ತಟಸ್ಥರಸಸಾರದ(pH 7) ಬೋರ್ಡೋ ದ್ರಾವಣ ತಯಾರಿಕೆ ಅತ್ಯಗತ್ಯ ಎಂದರು.
ಮುಂದುವರೆದು ತಟಸ್ಥ ಬೋರ್ಡೋ ದ್ರಾವಣ ತಯಾರಿಕೆಯಲ್ಲಿ ಬಳಸಬೇಕಾದ ಕ್ರಮಗಳನ್ನು ವಿಸ್ತಾರವಾಗಿ ತಿಳಿಸಿದ ಅವರು ನಿಧಾನ ಸೊರಗುರೋಗದ ನಿರ್ವಹಣೆಗೆ ಬೇವಿನ ಹಿಂಡಿಯನ್ನು ಬಳಸುವಂತೆ ತಿಳಿಸಿದರು.

ಕಾಳುಮೆಣಸಿ ಸಸಿಗಳನ್ನು ರೈತರು ತಾವೇ ತಯಾರಿಸಕೊಳ್ಳಬಹುದು, ಇದಕ್ಕಾಗಿ ನೆಲದಲ್ಲಿ ಹಬ್ಬಿರುವ ಓಡು ಬಳ್ಳಿಗಳನ್ನು ಬಳಸಬೇಕು ಮತ್ತು ಉತ್ಕøಷ್ಟ ಸಸಿಗಳನ್ನು ಬೆಳೆಸುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಕಾಳು ಮೆಣಸಿನ ನರ್ಸರಿಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ರೈತರ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ತಳಿಗಳನ್ನು ಬಳಸುವಂತೆ ಮತ್ತು ಸಮರ್ಪಕ ಪೋಷಕಾಂಶಗಳನ್ನು ಒದಗಿಸುವಂತೆ ತಿಳಿಸಿದರು.

ಕೀಟಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಂಜನ್‍ಕುಮಾರ್ ನಾಯ್ಕ, ರೋಗ ಶಾಸ್ತ್ರ ವಿಭಾಗದ ಸಹ ಸಂಶೋಧಕ ಪ್ರದೀಪ್‍ಕುಮಾರ್.ಬಿ.ಎ., ಮತ್ತು ತೀರ್ಥಹಳ್ಳಿಯ ಕೃಷಿ ಅಧಿಕಾರಿಗಳಾದ ಡಾ. ಅಜಿತ್, ರೈತರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!