ರಿಪ್ಪನ್‌ಪೇಟೆ ; ಹೊಸನಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಶ್ರೀಜೇನುಕಲ್ಲಮ್ಮ ದೇವಸ್ಥಾನ ಸರ್ವಾಂಗೀಣ ಅಭಿವೃದ್ದಿಗೆ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದ ಮಾದರಿಯಲ್ಲಿ ಆಧ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಕೋಡೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು ಈ ಕ್ಷೇತ್ರಕ್ಕೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ನಾಡಿನ ವ್ಯಾಪ್ತಿಯಲ್ಲಿ ಭಕ್ತರ ಸಮೂಹ ಹರಿದು ಬರುತ್ತಿದ್ದು ಪ್ರಕೃತಿ ಮಡಿನಲ್ಲಿ ನೆಲೆ ನಿಂತಿರುವ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಕ್ಷೇತ್ರದಲ್ಲಿ ಹಂತ ಹಂತವಾಗಿ ಕೇಂದ್ರ ಪ್ರವಾಸೋದ್ಯಮ ಮತ್ತು ರಾಜ್ಯ ಪ್ರವಾಸೋಧ್ಯಮ ಇಲಾಖೆಯಿಂದ ಹೆಚ್ಚಿನ ಅನುದಾನವನ್ನು ತರುವುದರೊಂದಿಗೆ ಪ್ರಕೃತಿಗೆ ತೊಂದರೆಯಾಗದಂತೆ ಪ್ರವಾಸಿಗರಿಗೆ ಯಾತ್ರಿ ನಿವಾಸ ನಿರ್ಮಾಣ, ಹಳೆ ಅಮ್ಮನವರ ಮೂಲ ಸ್ಥಳಕ್ಕೆ ಹೋಗಿ ಬರಲು ತೂಗು ಸೇತುವೆ ಹೀಗೆ ಹಲವು ಬಗೆಯಲ್ಲಿ ಅಭಿವೃದ್ದಿಯ ಕುರಿತು ನೀಲನಕ್ಷೆ ಸಿದ್ದಪಡಿಸಿ ಕೂಡಲೇ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸುವ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಅನುದಾನ ಕೊಡಿಸುವುದಾಗಿ ಹೇಳಿದರು.

ನಮ್ಮ ತಂದೆಯವರು ಈ ಹಿಂದೆಯೇ ಕ್ಷೇತ್ರದ ಅಭಿವೃದ್ದಿಗೆ 50 ಸಾವಿರ ರೂ. ಹಣ ಬಿಡುಗಡೆ ಮಾಡಿದ್ದರು ಎಂಬುದನ್ನು ಕೇಳಿ ಹರ್ಷ ವ್ಯಕ್ತಪಡಿಸಿ, ನಾನು ನನ್ನ ಅವಧಿಯಲ್ಲಿ ಈ ಕ್ಷೇತ್ರದ ಪ್ರಗತಿಗೆ ಸದಾ ಸಿದ್ದರಿರುವುದಾಗಿ ಹೇಳಿದ ಅವರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಸ್ವಾಮಿರಾವ್, ಕಿಮ್ಮನೆ ರತ್ನಕರ್ ಹೀಗೆ ಅವರು ಸಹ ಅಭಿವೃದ್ದಿಗೆ ಶ್ರಮಿಸಿದ್ದಾರೆಂದು ಪ್ರಶಂಸಿಸಿ, ನಾನು ಅದೇ ರೀತಿಯಲ್ಲಿ ಚಂದ್ರಗುತ್ತಿಯಂತೆ ಈ ಕ್ಷೇತ್ರವನ್ನು ಅಭಿವೃದ್ದಿಗೆ ಕಟ್ಟಿಬದ್ದರಿರುವುದಾಗಿ ಹೇಳಿದ ಅವರು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರು.

800 ಕೆಪಿಎಸ್ ಶಾಲೆ ಆರಂಭ ;
ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 500 ಕೆಪಿಎಸ್ ಶಾಲೆ ಆರಂಭಿಸುವುದಾಗಿ ಹೇಳಲಾಗಿದ್ದು ಅದನ್ನು ಇನ್ನೂ ಹೆಚ್ಚು ಮಾಡುವ ಮೂಲಕ 800 ಶಾಲೆಗಳನ್ನು ಆರಂಭಿಸಲಾಗುವ ಬಗ್ಗೆ ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ನಡೆಸಲಾಗುತ್ತಿದೆ ಎಂದರು.

ಜಾತಿ ಗಣತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ;
ಇಂದಿನಿಂದ ಜಾತಿ ಜನಾಂಗದ ಸಮೀಕ್ಷೆ ಆರಂಭಗೊಂಡಿದ್ದು ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ವಜನಾಂಗದವರಿಗೂ ಸಾಮಾಜಿಕ ನ್ಯಾಯ ದೊರೆಕಿಸಿಕೊಡುವ ಹಿನ್ನಲೆಯಲ್ಲಿ ಸೆ. 22 ರಿಂದ ಅ. 7ರ ತನಕ ಜಾತಿ ಸಮೀಕ್ಷೆ ನಡೆಯಲಿದ್ದು ಶಿಕ್ಷಕರುಗಳು ತಮ್ಮ ಮನೆಯ ಬಾಗಿಲಿಗೆ ಬಂದು ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸರಿಯಾದ ಮಾಹಿತಿಗಳನ್ನು ನೀಡುವ ಮೂಲಕ ತಮ್ಮ ಜಾತಿಗೆ ಬರಬೇಕಾದ ಮೂಲಭೂತ ಸೌಕರ್ಯಗಳಿಗೆ ಸಹಕಾರಿಯಾಗಲಿದೆ. ರಾಜ್ಯದ ಎಲ್ಲರೂ ಜಾತಿಜನಾಂಗವದರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಜೇನುಕಲ್ಲಮ್ಮ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಕಾರ್ಯಾಧ್ಯಕ್ಷ, ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 22 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಯ ಕ್ರಿಯಾಯೋಜನೆಯ ಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಸಚಿವರಿಗೆ ಮನವಿ ಪತ್ರದ ಮೂಲಕ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಕೋಡೂರು ಗ್ರಾಮ ಪಂಚಾಯಿತ್ ಅಧ್ಯಕ್ಷ ಜಯಪ್ರಕಾಶ್, ಚಿಕ್ಕಜೇನಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಎನ್.ಪಿ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ರಾಮಚಂದ್ರ, ಶ್ವೇತಾ ಆರ್.ಬಂಡಿ, ತಾಲ್ಲೂಕು ಪಂಚಾಯಿತ್ ಮಾಜಿ ಸದಸ್ಯ ಎರಗಿ ಉಮೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ರಮೇಶ, ಬಿ.ಜಿ.ನಾಗರಾಜ್, ಎಂ.ಪಿ.ಸುರೇಶ್, ಇನ್ನಿತರರು ಹಾಜರಿದ್ದರು.




ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.