ಹೊಂಬುಜ ; ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಪರಂಪರಾನುಗತವಾಗಿ ವಾರ್ಷಿಕ ರಥೋತ್ಸವ ಧಾರ್ಮಿಕ ವಿಧಾನಗಳು ಧ್ವಜಾರೋಹಣ ಮಾಡುವ ಮೂಲಕ ಆರಂಭಗೊಂಡಿದೆ.
ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆಗಮೋಕ್ತ ಶಾಸ್ತçದನ್ವಯ ಪೂಜಾ ವಿಧಿಗಳು ನೆರವೇರಿದವು.

ಪೂರ್ವ ಪರಂಪರೆಯಂತೆ, ಆಗಮೋಕ್ತ ಶಾಸ್ತ್ರದನ್ವಯ ಇಂದ್ರಪ್ರತಿಷ್ಠೆ, ವಿಮಾನಶುದ್ಧಿ, ಯಕ್ಷ ಪ್ರತಿಷ್ಠೆ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ಮಹಾನೈವೇದ್ಯ ಪೂಜೆ, ನಾಂದಿಮಂಗಲ, ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ ವಿಧಿಗಳು ಜರುಗಿದವು.
ಮಾ. 05 ರಂದು ಶ್ರೀಕ್ಷೇತ್ರದ ಶ್ರೀಮಠದ ಬಸದಿ, ಶ್ರೀ ನೇಮಿನಾಥ ಸ್ವಾಮಿ ಸನ್ನಿಧಿಯಲ್ಲಿ ಗಣಧರವಲಯ ಆರಾಧನೆ, ಮಾ. 06ರಂದು ಮಕ್ಕಳ ಬಸದಿ ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ಕಲ್ಯಾಣ ಮಂದಿರ ಆರಾಧನೆ, ಮಾ. 07ರಂದು ನಗರ ಜಿನಾಲಯ ಶ್ರೀ ಮಹಾವೀರ ಸ್ವಾಮಿ ಸನ್ನಿಧಿಯಲ್ಲಿ ಭಕ್ತಾಮರ ಆರಾಧನೆ, ಮಾ. 08 ಭೋಗಾರ ಬಸದಿಯಲ್ಲಿ ಚೌಷಟ್ ಋದ್ಧಿ ವಿಧಾನಗಳು ನೆರವೇರಿದವು.

ಇಂದು ಸಂಜೆ ನಾಗವಾಹನೋತ್ಸವವು ಸಾಂಗವಾಗಿ ಪೂಜಾ ವಿಧಿಗಳೊಂದಿಗೆ ನೆರವೇರಿಸಿ, ನಗರ ಪ್ರದಕ್ಷಿಣೆಯ ಶ್ರೀ ವಿಹಾರ ನಡೆಯಿತು. ಸಾಲಂಕೃತ ಶೋಭಾಯಾತ್ರೆ ಮೆರಗು ನೀಡಿತು.
ಸೇವಾಕರ್ತೃರಾದ ಶ್ರೀಮತಿ ರಚನಾ ಜೈನ್, ಸಂಜೀವ್ ಜೈನ್, ಅಶೋಕ ಕಂಪನಿ, ದೆಹಲಿಯವರು ಪೂಜಾ ವಿಧಿ, ಭೋಜನ ಸೇವೆಯನ್ನು ಅರ್ಪಿಸಿದರು.

