ಹೊಸನಗರ : ಸುಮಾರು 30ವರ್ಷಗಳ ಹಿಂದೆ ಪ್ರತಿಯೊಬ್ಬ ತಹಸೀಲ್ದಾರರು ಇಲ್ಲಿನ ತಹಸೀಲ್ದಾರ್ ಮನೆಯೆಂದೇ ಕರೆಸಿಕೊಳ್ಳುವ ತಾಲ್ಲೂಕು ಕಛೇರಿಗೆ ಎದುರು ಕಾಣುವ ನೆಹರು ಮೈದಾನದ ಪಕ್ಕದಲ್ಲಿರುವ ತಹಸೀಲ್ದಾರ್ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಈ ಹಿಂದೆ ಇದ್ದ ತಹಸೀಲ್ದಾರ್ ಆಗಿದ್ದ ಚಂದ್ರಶೇಖರ ನಾಯಕ್ ಸಾಗರಕ್ಕೆ ವರ್ಗಾವಣೆವಾಗಿ ಹೋದ ಮೇಲೆ ಅಂದರೆ ಸುಮಾರು 6 ವರ್ಷಗಳಿಂದ ಈ ಹೆಂಚಿನ ಮನೆಯಲ್ಲಿ ಯಾರು ವಾಸವಿಲ್ಲದೇ ಪಾಳುಬಿದ್ದಿದೆ.
ಕಾಲಬದಲಾದಂತೆ ತಹಸೀಲ್ದಾರ್‌ಗಳು ಬದಲಾಗುತ್ತಿದ್ದು ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಿಸಿದ ಹೆಂಚಿನಮನೆಯಲ್ಲಿ ಯಾರು ವಾಸ ಮಾಡುತ್ತಾರೆ ಎಂದು ಹೊಸದಾಗಿ ಬರುವ ತಹಸೀಲ್ದಾರ್‌ಗಳು ಆರ್.ಸಿ.ಸಿ ಮನೆ ಹುಡುಕುವುದರ ಜೊತೆಗೆ ಅವರಿಗೆ ಅನುಕೂಲಕರವಾಗಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.
ದಸರಾ ಹಬ್ಬಕ್ಕೆ ಮಾತ್ರ ಸೀಮಿತ ಈ ಮನೆ
ದಸರಾ ಹಬ್ಬದ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗೆ ಮೈಸೂರು ರಾಜರ ಉಡುಪಿನೊಂದಿಗೆ ಮೆರವಣಿಗೆ ನಡೆಸಲು ಉಪ ಖಜಾನೆ ಪೂಜೆಗಾಗಿ ತಾಲ್ಲೂಕು ಕಛೆರಿಯಲ್ಲಿ ನಡೆಯುವ ಚಾಮುಂಡೇಶ್ವರಿ ದೇವಿಯ ಪೂಜೆಗಾಗಿ ಹಾಗೂ ಈಶ್ವರ ದೇವಸ್ಥಾನದ ಮುಂಭಾಗ ಬನ್ನಿ ಕಡಿಯುವ ಹಬ್ಬಕ್ಕೆ ಊರಿನ ಗಣ್ಯರು ಹಾಗೂ ನಾಡಹಬ್ಬದ ಸಮಿತಿಯವರು ತಹಸೀಲ್ದಾರ್‌ರವರನ್ನು ಈ ಪಾಳುಬಿದ್ದ ಹೆಂಚಿನ ಮನೆಯಿಂದ ಪೂಜೆಗಾಗಿ ಕರೆದುಕೊಂಡು ಬರುವುದನ್ನು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಯಾವ ತಹಸೀಲ್ದಾರ್‌ರರು ಈ ಮನೆಯಲ್ಲಿ ವಾಸಿಸುತ್ತಿಲ್ಲ.
ಬೇರೆ ಅಧಿಕಾರಿಗಳಿಗೆ ವಾಸ ಮಾಡಲು ನೀಡಿ
ಇತ್ತೀಚಿಗೆ ಬರುವ ಯಾವ ತಹಸೀಲ್ದಾರ್‌ಗಳು ಈ ಹೆಂಚಿನ ಮನೆಗೆ ವಾಸಕ್ಕೆ ಬರುತ್ತಿಲ್ಲ. ಇದನ್ನು ಮನಗಂಡು ಹೊಸನಗರದ ತಾಲ್ಲೂಕು ಪಂಚಾಯತಿ ಮ್ಯಾನೆಂಜರ್ ಶಿವಕುಮಾರ್ ಪಿಡ್ಲ್ಯೂಡಿ ಇಂಜಿನಿಯರ್‌ರವರ ಒಪ್ಪಿಗೆಯ ಮೇರೆಗೆ ಈ ಮನೆಗೆ ವಾಸಕ್ಕೆ ಬಂದು ಸುತ್ತ-ಮುತ್ತ ಮನೆಯ ಪ್ರದೇಶಗಳನ್ನು ಸ್ವಚ್ಛ ಮಾಡಿಕೊಂಡು ಸಂಸಾರ ಸಹಿತ ವಾಸವಾಗಿದ್ದರು. ಆದರೆ ಯಾರು ಕಿವಿ ಹಿಂಡಿದರೂ ಗೊತ್ತಿಲ್ಲ ಇವರಿಗೆ, ತಹಸೀಲ್ದಾರ್ ಮನೆಯಲ್ಲಿ ತಾವು ವಾಸಿಸಬಾರದು ಎಂದು ಅವರನ್ನು ಈ ಮನೆಯಿಂದ ಖಾಲಿ ಮಾಡಿಸಿದರು. ಈಗಿರುವ ತಹಸೀಲ್ದಾರ್ ವರ್ಗಾವಣೆಯಾಗಿದೆ ಹೊಸ ತಹಸೀಲ್ದಾರ್ ಬರಬೇಕು, ಬರುವ ಹೊಸ ತಹಸೀಲ್ದಾರ್ ಈ ಮನೆಯಲ್ಲಿ ವಾಸ ಮಾಡದಿದ್ದರೆ ಬೇರೆ ಸರ್ಕಾರಿ ಅಧಿಕಾರಿಗಳಿಗೆ ಬಾಡಿಗೆಗೆ ಮನೆ ನೀಡಿ ತಹಸೀಲ್ದಾರ್ ಎಂಬ ಹೆಸರಿನ ಮನೆಯನ್ನು ಉಳಿಸಿ ಇಲ್ಲವಾದರೆ ಇದು ಭೂತದ ಬಂಗಲೆಯಾಗಲಿದೆ ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





