ಹೊಸನಗರ ; ಇತ್ತೀಚೆಗೆ ನಿಧನರಾದ ಖ್ಯಾತ ಸಾಹಿತಿ, ಕಾದಂಬರಿಕಾರ ದಿವಂಗತ ಎಸ್.ಎಲ್. ಭೈರಪ್ಪ ಕುರಿತಂತೆ ಅವರ ಬದುಕು ಹಾಗೂ ವಿವಿಧ ಕೃತಿಗಳಲ್ಲಿನ ವಿಚಾರಧಾರೆಗಳ ಮೇಲೆ ಓದುಗರು ಪಂಕ್ತಿ ಮುಕ್ತ ಚರ್ಚೆ ನಡೆಸಿದಲ್ಲಿ ಮಾತ್ರವೇ ಇಡೀ ಸಮಾಜ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಶಿವಮೊಗ್ಗ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಸ್. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಕಸಾಪ ಕಚೇರಿ ಆವರಣದಲ್ಲಿ ದಿವಂಗತ ಎಸ್. ಎಲ್.ಭೈರಪ್ಪ ಕುರಿತು ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭೈರಪ್ಪ ಅವರ ವಂಶವೃಕ್ಷ ಕಾದಂಬರಿಯ ಕೆಲವು ಸಾಲುಗಳನ್ನು ಸಭಿಕರಿಗೆ ಉಣಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೈರಪ್ಪನವರ ಕಥೆ, ಕಾದಂಬರಿ, ಬರಹಗಳಿಗಿಂತ ಅವರ ವೈಯಕ್ತಿಕ ಬದುಕು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಚರ್ಚೆಗೆ ಗ್ರಾಸವಾಗಿದೆ ಎಂಬುದೇ ವಿಷಾಧದ ಸಂಗತಿ ಆಗಿದೆ ಎಂದ ಅವರು, ಯಾವುದೇ ವ್ಯಕ್ತಿ ಸತ್ತ ನಂತರ ಆತನ ವೈಯಕ್ತಿಕ ವಿಚಾರಗಳು ಸಹ ಸಾಯುತ್ತವೆ. ಆದರೆ, ಆತ ರಚಿಸಿದ್ದ ಬರಹಗಳು ಸರ್ವಕಾಲ ಜೀವಿಸುತ್ತದೆ. ಭೈರಪ್ಪನವರು ನಿಗೂಢ ಪ್ರಕೃತಿಯಲ್ಲಿ ದೇವರನ್ನು ಕಂಡವರು. ಸಾಹಿತ್ಯದ ಜೊತೆಜೊತೆಗೆ ಸಂಗೀತವನ್ನು ಸವಿದವರು. ಅವರ ಕಾದಂಬರಿಗಳು ವಾಸ್ತವಕ್ಕೆ ಹತ್ತಿರವಿದ್ದು ನಿಷ್ಪಕ್ಷಪಾತದಿಂದ ಕೂಡಿವೆ ಎಂದರು.
ಖ್ಯಾತ ಲೇಖಕಿ, ವಿಮರ್ಶಕಿ ವಿಜಯ ಶ್ರೀಧರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಒಂದು ಹಳ್ಳಿ ದೇಶವ್ಯಾಪ್ತಿ ಎಷ್ಟು ಪ್ರಸಿದ್ದ ಪಡೆಯಲು ಸಾಧ್ಯ ಎಂಬುದಕ್ಕೆ ಎಸ್.ಎಲ್. ಭೈರಪ್ಪ ಅವರ ಬರಹಗಳೇ ಸಾಕ್ಷಿ. ಇತರೆ ಸಾಹಿತಿಗಳಂತೆ ಇವರು ಯಾವುದೇ ಕಾವ್ಯನಾಮ ಇಲ್ಲದೆಯೇ ಖ್ಯಾತರಾದವರು. ಇವರ 25 ಕಾದಂಬರಿಗಳ ವಿವಿಧ ಪಾತ್ರಗಳ ರಚನೆಯಲ್ಲಿ ತಮ್ಮ ವೈಯಕ್ತಿಕ ಬದುಕನ್ನು ತೊಡಗಿಸಿ, ಸ್ವತಹ ಅನುಭವಿಸಿ ಪಾತ್ರ ಸೃಷ್ಠಿಗೆ ನ್ಯಾಯ ಒದಗಿಸಿದವರು ಎಸ್.ಎಲ್. ಭೈರಪ್ಪ. ಅವರೊಬ್ಬ ನಿಜವಾದ ತತ್ವಜ್ಞಾನಿ. ಈ ಬಗ್ಗೆ ಅವರಿಗೆ ಹೆಚ್ಚಿನ ಅರಿವಿತ್ತು. ತಮ್ಮ ಬಾಲ್ಯದ ಅತಿ ಕಡಿಮೆ ಅವಧಿಯಲ್ಲಿ ಅವರು ಕಂಡಿದ್ದ ಕುಟುಂಬದಲ್ಲಿನ ತಾಯಿ, ಸಹೋದರ, ಸಹೋದರಿಯರ ಸಾವು ಅವರಿಗೆ ಬದುಕನ್ನು ಕುರಿತು ಅತಿಯಾದ ಅನುಭವ ನೀಡಿತ್ತು.
ಪಂಪ, ರನ್ನ, ಕುಮಾರವ್ಯಾಸರಂತೆ ಭೈರಪ್ಪ ಅವರ ಕೃತಿಗಳು ಎಲ್ಲಾ ಕಾಲಕ್ಕೂ ಅಜರಾಮರ ಎಂದರು.
ಇದೇ ವೇಳೆ ಭೈರಪ್ಪನವರ ದಾಟು, ಪರ್ವ, ಸಾರ್ಥ, ದೂರ ಸರಿದರು, ಮಂದ್ರ, ಮತದಾನ, ತಂತು, ಆವರಣ, ವಂಶವೃಕ್ಷ, ಅಂಚು, ಜಲಪಾತ ಸೇರಿದಂತೆ ವಿವಿಧ ಕಾದಂಬರಿಗಳಲ್ಲಿನ ಪಾತ್ರ, ಸಂದರ್ಭ ಕುರಿತು ಸಮಗ್ರ ವಿಮರ್ಶೆ ನೀಡಿದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ, ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲ, ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಉಪಸ್ಥಿತರಿದ್ದರು.
ಪ್ರಮುಖರಾದ ಗುರುದೇವ ಭಂಡಾರ್ಕರ್, ವಕೀಲ ಕೆ.ಬಿ.ಪ್ರಶಾಂತ್, ಎಂ.ವಿ. ಜಯರಾಮ್, ಸಾಹಿತಿ, ಅಧ್ಯಾಪಕ ಡಾ. ಶ್ರೀಪತಿ ಹಳಗುಂದ, ರಾಮ ದಿವಾಕರ್ ಸೇರಿದಂತೆ ಹಲವರು ಭೈರಪ್ಪ ಅವರ ಕಾದಂಬರಿ ತಮ್ಮ ಮೇಲೆ ಬೀರಿದ ಪರಿಣಾಮ ಕುರಿತಂತೆ ಮಾತನಾಡಿದರು.
ನಿವೃತ್ತ ಶಿಕ್ಷಕ ಶಂಕರಪ್ಪ ಸ್ವಾಗತಿಸಿ, ಸರಸ್ವತಿ ನಳೀನಚಂದ್ರ ಪ್ರಾರ್ಥಿಸಿದರು. ಪತ್ರಕರ್ತೆ ಅಶ್ವಿನಿ ಪಂಡಿತ್ ನಿರೂಪಿಸಿ, ಕಾರ್ಯದರ್ಶಿ ಪ್ರವೀಣ್ ಕಾರ್ಗಡಿ ಹಾಗು ಕೆ.ಜಿ. ನಾಗೇಶ್ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.