ರಿಪ್ಪನ್‌ಪೇಟೆ : ಪ್ರತಿ ಮನೆಗೂ ನಲ್ಲಿ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯು ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕ ತಂದೊಡ್ಡುತ್ತಿದೆ.
ಹೌದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾ.ಪಂ. ವ್ಯಾಪ್ತಿಯ ಕಲ್ಲುಕೊಪ್ಪ ಗ್ರಾಮದಲ್ಲಿ ಜೆಜೆಎಂ ಪೈಪ್ ಲೈನ್ ಕಾಮಗಾರಿ ನೆಪದಲ್ಲಿ ಮಳೆಗಾಲ ಮುಕ್ತಾಯವಾಗುವ ಮುನ್ನವೇ ಗ್ರಾಮದ ಮುಖ್ಯ ರಸ್ತೆಯನ್ನು ಅಗೆದಿದ್ದು ಇದರಿಂದಾಗಿ ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ರಸ್ತೆ ಕೆಸರು ಗದ್ದೆಯಂತಾಗಿ ಮಾರ್ಪಟ್ಟಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1b1RrUMRSf/
ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಜೆಸಿಬಿ ಯಂತ್ರವನ್ನು ತಡೆಹಿಡಿದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ನಡೆದಿದೆ.
ಇನ್ನೂ ಮಳೆ ಬೀಳುತ್ತಿರುವುದರಿಂದ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿ ಕೆಲಸಕ್ಕೆ ತೆರಳಲು, ಅನಾರೋಗ್ಯ ಸಮಸ್ಯೆ ಉಂಟಾದಾಗ ಆಸ್ಪತ್ರೆಗೆ ತೆರಳುವುದು, ದಿನನಿತ್ಯ ವಸ್ತು ಖರೀದಿಗಾಗಿ ಪೇಟೆ-ಪಟ್ಟಣಕ್ಕೆ ಹೋಗಲು, ಸರ್ಕಾರಿ ಸೌಲಭ್ಯ, ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಖರೀದಿಸಲು ಇನ್ನಿತರೆ ಕೆಲಸ ಕಾರ್ಯಕ್ಕೆ ತೆರಳಲು ಇಲ್ಲಿನ ಗ್ರಾಮಸ್ಥರು ಪರದಾಡುವಂತಾಗಿದೆ.
ವಾಹನ ಮೂಲಕ ಸಂಚರಿಸುವುದಿರಲಿ, ಸಾರ್ವಜನಿಕರು ತಿರುಗಾಡುವುದು ಸಹ ಕಷ್ಟ ಸಾಧ್ಯವಾಗಿದೆ. ಇನ್ನು ಮಳೆ ಬೀಳುತ್ತಿರುವುದರಿಂದ ಆಟೋದವರು ಈ ಕಡೆ ಬರುವುದಿಲ್ಲ. ದ್ವಿಚಕ್ರ ವಾಹನದಲ್ಲಿ ಸಾಗುವಾಗ ನಿಯಂತ್ರಣ ತಪ್ಪಿ ಬೀಳುವುದು ಇಲ್ಲಿ ಸರ್ವೇ ಸಾಮಾನ್ಯದಂತಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕಿದೆ.
ಕಾಮಗಾರಿ ನೆಪದಲ್ಲಿ ರಸ್ತೆ ಅಗೆದಿರುವುದರಿಂದ ವಯಸ್ಸಾದವರಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಕರೆದೊಯ್ಯಲು ಸಮಸ್ಯೆ ಆಗುತ್ತಿದೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ, ಪೇಟೆ-ಪಟ್ಟಣಕ್ಕೆ ಹೋಗಿ ಬರಲು ಸಾರ್ವಜನಿಕರಿಗೂ ತೀವ್ರ ಸಮಸ್ಯೆ ಆಗಿದೆ. ತಕ್ಷಣ ರಸ್ತೆ ರಿಪೇರಿ ಮಾಡಿ, ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸಿ.
– ಕೃಷ್ಣಮೂರ್ತಿ, ಸ್ಥಳೀಯ ನಿವಾಸಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.