ಮಾತೃತ್ವದ ಅದಮ್ಯ ಶಕ್ತಿಯಾಗಿರುವ ಹೆಣ್ಣು ಸುಶಿಕ್ಷಿತಳಾಗಿ ಬದಲಾವಣೆ ತರಬೇಕು ; ಡಾ.ನಾಗಲಕ್ಷ್ಮಿ ಚೌಧರಿ

Written by Mahesha Hindlemane

Published on:

ಶಿವಮೊಗ್ಗ ; ಹೆಣ್ಣು ಮಾತೃತ್ವದ ಅದಮ್ಯ ಶಕ್ತಿಯಾಗಿದ್ದು , ಶಿಕ್ಷಣವೆಂಬ ಅಸ್ತ್ರವನ್ನು‌ ಹೊಂದಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಡಾ.ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪದವಿ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಿಕ್ಷಣ ಬಹಳ ದೊಡ್ಡ ಶಕ್ತಿ ಮತ್ತು ಶಸ್ತ್ರ. ಇದರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಿದ್ದು ನೀವೆಲ್ಲಾ ಸುಶಿಕ್ಷಿತರಾಗಿ ಬದಲಾವಣೆ ತರಬೇಕೆಂದರು.
ಡಾ.ಅಂಬೇಡ್ಕರ್ ರವರ ಧ್ಯೇಯವಾಕ್ಯಗಳಾದ ಶಿಕ್ಷಣ, ಸಂಘಟನೆ, ಹೋರಾಟ ನಮಗೆಲ್ಲ ಬಹು ಮುಖ್ಯವಾಗಿದ್ದು ಶಿಕ್ಷಣ ಪಡೆದು, ಸಂಘಟಿತರಾಗಿ‌ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕು ಯಾವ ಹಕ್ಕುಗಳಿಗಾಗಿ ನಾವು ಹೋರಾಡುತ್ತೀವೋ ಅದು ಲಭಿಸುತ್ತದೆ.

ನನ್ನ ತಂದೆ ನನಗೆ ಶಿಕ್ಷಣ ನೀಡದಿದ್ದರೆ ನಾನಿಂದು ಈ ಸ್ಥಾನದಲ್ಲಿ‌ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು ಹೆಣ್ಣುಮಕ್ಕಳೆಲ್ಲ ಶಿಕ್ಷಿತರಾಗಬೇಕು. ಒಂದು ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಪ್ರತಿ ದಿನ ಆ ಗುರಿಯ ಕನಸು ಕಾಣಬೇಕು, ಅದಕ್ಕಾಗಿ ಶ್ರಮ ಪಡಬೇಕು. ಶ್ರಮ ಇದ್ದರೆ ಮಾತ್ರ ಫಲ. ಕಷ್ಟಪಟ್ಟರೆ ಏನಾನ್ನಾದರೂ ಸಾಧಿಸಬಹುದು ಎಂದರು.

ಯುವಜನತೆಗೆ ಮೊಬೈಲ್ ಇಂದು ನಿಜವಾದ ಸವಾಲು ಆಗಿದೆ. ಮೊಬೈಲ್ ನ ಗುಲಾಮ ನೀವಾಗಬಾರದು. ಅಗತ್ಯಕ್ಜಿಂತ ಹೆಚ್ಚು ಅದನ್ನು ಬಳಸಿದರೆ ನಿಮ್ಮ ಗುರಿ ಸಾಧಿಸಲು ಸಾಧ್ಯವಿಲ್ಲ. ಕನಿಷ್ಟ 3 ಗಂಟೆ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು.ಅರಿವು ಬದುಕು, ಅಜ್ಞಾನ ಸಾವು. ಶಿಕ್ಷಣದ ಜೊತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಂವಾದದ ವೇಳೆ ವಿದ್ಯಾರ್ಥಿನಿಯರು ರಾಜಕೀಯ ಕ್ಷೇತ್ರದ ಬಗ್ಗೆ ಋಣಾತ್ಮಕ ನಿಲುವು ತೋರಿದಾಗ ಅಧ್ಯಕ್ಷರು, ರಾಜಕಾರಣ ಒಂದು
ಸಾಮಾಜಿಕ ಜವಾಬ್ದಾರಿ. ಜನರ ಬದುಕನ್ನು ಬದಲಾಯಿಸಲು ರಾಜಕಾರಣಕ್ಕೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು, ಹೆಣ್ಣು ಮಕ್ಕಳು ರಾಜಕಾರಣಕ್ಕೆ ಬರಬೇಕು. ರಾಜಕಾರಣ ಪ್ರಗತಿಯ ಬೀಗವಾಗಿದ್ದು ಹೆಣ್ಣು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಈ ಪ್ರಗತಿ ಸಾಧ್ಯವಾಗುತ್ತದೆ. ನೀವು ಸಮಾಜದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ‌ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.

ಯಾರೇ ಆಗಲಿ ತಪ್ಪು ಮಾಡುವುದು ಸಹಜ. ತಿದ್ದಿಕೊಂಡು ಸಾಧಿಸುವೆಡೆ ಮುನ್ನಡೆಯಬೇಕು. ಹೆಣ್ಣಿಗೆ ಬಹಳ ಶಕ್ತಿ ಇದೆ. ನಾವು ನಡೆಯುವ ಹಾದಿಯಲ್ಲಿ ಕಲ್ಲು, ಮುಳ್ಳು, ಹೂವು ಎಲ್ಲವೂ ಇರುತ್ತದೆ. ಅದೆಲ್ಲವನ್ನು ದಾಟಿ ಸಾಗಬೇಕು.

ವಿದ್ಯಾರ್ಥಿಗಳಾದ ನೀವು ಜಿಲ್ಲೆಯ ಸಮಸ್ಯೆಗಳ‌ ಕುರಿತು ಜಿಲ್ಲಾಧಿಕಾರಿ, ಎಸ್ ಪಿ, ಸಿಇಓ, ಜಿಲ್ಲೆಯ ವಿವಿಧ ಅಧಿಕಾರಿಗಳಿಗೆ ತಿಳಿಸಬೇಕು.

ಸೈಬರ್ ಜಗತ್ತು ಒಂದು ಬಹಳ ದೊಡ್ಡ ಅಭದ್ರತೆ ಸೃಷ್ಟಿಸಿದೆ. ಫೇಕ್ ಅಕೌಂಟ್ ಮೂಲಕ ಹೆಣ್ಣು ಮಕ್ಕಳಿಗೆ ದಾಳ ಹಾಕಿ ಬಲೆಗೆ ಸೆಳೆದು ಕೂಪಕ್ಕೆ ತಳ್ಳಲಾಗುತ್ತಿದೆ. ಸೈಬರ್ ಕ್ರೈಂ ಜಗತ್ತು ವಿಚಿತ್ರವಾಗಿದ್ದು ಬಹಳ ಜಾಗೃತರಾಗಿರಬೇಕು. ಸೈಬರ್ ಕ್ರೈಮ್ ಗೆ ಸಂಬಂಧಿಸಿದಂತೆ ಬ್ಲಾಕ್ಮೇಲ್ ಇತರೆ ಸಮಸ್ಯೆಗಳಿದ್ದರೆ ದೂರು ನೀಡಬೇಕು. ಧೈರ್ಯವಾಗಿ ಎದುರಿಸಬೇಕು. ಜೀವ ಕಳೆದುಕೊಳ್ಳಬಾರದು. ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಅಥವಾ 112 ಗೆ ಕರೆ ಮಾಡಬೇಕು. ಈಗಲೇ ಎಲ್ಲರೂ ಸುರಕ್ಷಾ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ವಿದ್ಯಾರ್ಥಿನಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದ ಅವರು ವಿದ್ಯಾರ್ಥಿನಿಯರೊಂದಿಗೆ ಪ್ರೇರಣಾತ್ಮಕವಾಗಿ ಸಂವಾದ ನಡೆಸಿದರು.

ಸಂವಾದದ ವೇಳೆ ವಿದ್ಯಾರ್ಥಿನಿಯರು ಸೈಬರ್ ದೂರಿನ ಬಗ್ಗೆ , ವಸತಿ ನಿಲಯದಲ್ಲಿ ಸೀಟ್ ಸಿಗದಿರುವ ಬಗ್ಗೆ ಹಾಗೂ ವಿದ್ಯಾರ್ಥಿ ವೇತನ ಬಾರದಿರುವ ಬಗ್ಗೆ ದೂರಿದರು.

ಕಾರ್ಯಕ್ರಮದಲ್ಲಿ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ‌ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ‌ ನಿರ್ದೇಶಕಿ ಯಶೋಧ, ಉಪನ್ಯಾಸಕ ಚಂದ್ರಮೋಹನ್, ಇತರೆ ಅಧಿಕಾರಿಗಳು, ವಿವಿಧ ಕಾಲೇಜುಗಳ‌ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Leave a Comment