ಹೊಸನಗರ ಆರ್ಯ ಈಡಿಗರ ಸಂಘದಲ್ಲಿ ಅವ್ಯವಹಾರ ಆರೋಪ ; ಪ್ರತಿಭಟನೆ

Written by Mahesha Hindlemane

Published on:

ಹೊಸನಗರ ; ತಾಲ್ಲೂಕು ಆರ್ಯ ಈಡಿಗರ (ದೀವರ) ಸಂಘದಲ್ಲಿ ಕಳೆದ 10-15 ವರ್ಷಗಳಿಂದ ನಿರಂತರವಾಗಿ ಅವ್ಯವಹಾರ ನಡೆಯುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೀವರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನರ‍್ಲೆ ಸ್ವಾಮಿಯವರ ನೇತೃತ್ವದಲ್ಲಿ ಆರ್ಯ ಈಡಿಗರ ಸಭಾ ಭವನದ ಎದುರು ಧರಣಿ ಪ್ರತಿಭಟನೆ ನಡೆಸಿ ತಕ್ಷಣ ತನಿಖೆ ನಡೆಸದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ನೇತೃತ್ವ ವಹಿಸಿದ ನರ‍್ಲೆ ಸ್ವಾಮಿ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಆರ್ಯ ಈಡಿಗ ಸಮುದಾಯದ ಹಿತರಕ್ಷಣೆ, ಸಂಘಟನೆಯ ದೃಷ್ಠಿಯೊಂದಿಗೆ ಆರಂಭಗೊಂಡ ಆರ್ಯ ಈಡಿಗರ ಸಂಘ ದಾರಿ ತಪ್ಪಿದೆ. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಬದಲಿಗೆ ಸಂಘದಲ್ಲಿನ ಕೆಲ ಪ್ರಭಾವಿ ವ್ಯಕ್ತಿಗಳು ಸ್ವಹಿತಾಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರಂತರವಾಗಿ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದೆ. ಅಧಿಕಾರ ಹೊಂದಿರುವವರು, ಸರಿಯಾದ ಲೆಕ್ಕಪತ್ರಗಳನ್ನು ಇಡದೇ ಹಣದ ದುರುಪಯೋಗ ನಡೆಸಿದ್ದಾರೆ. ವಾರ್ಷಿಕ ಲೆಕ್ಕಪತ್ರಗಳನ್ನು ಸದಸ್ಯರಿಗೆ, ಸಾರ್ವಜನಿಕರಿಗೆ ನೀಡುವಲ್ಲಿ ವಿಫಲರಾಗಿದ್ದಾರೆ. ನಿಯಮಾನುಸಾರ ನಡೆಯಬೇಕಿದ್ದ ವಾರ್ಷಿಕ ಸದಸ್ಯರ ಸಭೆ ನಡೆಯುತ್ತಿಲ್ಲ. ಪಾರದರ್ಶಕ ಆಡಳಿತ ನೀಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ದೀವರ ಅಭಿವೃದ್ಧಿಗೆ ಶ್ರಮಿಸಬೇಕಿದ್ದ ಸಂಘವು ಭ್ರಷ್ಟಾಚಾರದಲ್ಲಿ ತೊಡಗಿದೆ. ಸದಸ್ಯರು, ಸಮಾಜದ ಹಿತಚಿಂತಕರಿಂದ ಚಂದಾ ವಸೂಲಿ ಮಾಡುತ್ತಿರುವ ಹಣದ ಲೆಕ್ಕಪತ್ರಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದರು.

ಕೂಡಲೇ ಈಗಿನ ಸಂಘವನ್ನು ಪದಚ್ಯುತಗೊಳಿಸಬೇಕು. ಯುವ ಉತ್ಸಾಹಿ ಹಾಗೂ ಸಮಾಜದ ಏಳಿಗೆಗಾಗಿ ಶ್ರಮಿಸುವ ಮನೋಭಾವ ಹೊಂದಿರುವವರನು ಒಳಗೊಂಡ ಆಡಳಿತ ಮಂಡಳಿಯನ್ನು ರಚಿಸಬೇಕು. ಸಮಾಜದ ಹಿತಕ್ಕಾಗಿ ಸರ್ವ ಸದಸ್ಯರ ಸಭೆ ಕರೆದು ಮುಂದಿನ ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ. ವಿಚಾರ ವಿಮರ್ಶೆ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿ ರಚನೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ತಕ್ಷಣ ತನಿಖೆ ನಡೆಸದಿದ್ದರೇ ಮುಂದಿನ ದಿನದಲ್ಲಿ ಇನ್ನೂ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಇಂದಿನ ಆರ್ಯಈಡಿಗರ ಸಂಘದ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಎಚ್ಚರಿಸಿದರು.

ಪ್ರಮುಖರಾದ ಹಾರೋಕೊಪ್ಪ ಶ್ರೀಧರ, ಡಾ.ಸೊನಲೆ ಶ್ರೀನಿವಾಸ್, ಕುಮಾರ ಮಂಡಾನಿ, ವಾಸಪ್ಪ ಮಾಸ್ತಿಕಟ್ಟೆ, ಗಣಪತಿ ಮಾವಿನಕಟ್ಟೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Comment