ಹೊಸನಗರ ; 2024-25ನೇ ಸಾಲಿನ ಬೆಳೆವಿಮೆ ಬಿಡುಗಡೆಗೊಂಡಿದ್ದು ರೈತಾಪಿವರ್ಗಕ್ಕೆ ಈ ಬಾರಿ ಅತ್ಯಂತ ಕನಿಷ್ಟ ವಿಮೆ ಹಣ ನೀಡಲಾಗಿದೆ ಎಂದು ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಎ.ವಿ. ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ 9869 ರೈತರಿಗೆ 9.81 ಕೋಟಿ ರೂ. ಬೆಳೆವಿಮೆ ಹಣ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಇದ್ದಾಗಿದ್ದು, ಈ ತಾಲೂಕಿನ ಅಡಿಕೆ ಬೆಳೆಗಾರರು ಎಲೆಚುಕ್ಕೆ, ಬೇರು ಹುಳು, ಸುಳಿರೋಗದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಸಹಕಾರಿ ಎಂದರು.
ತಾಲೂಕಿನ ಒಟ್ಟು 30 ಗ್ರಾಮ ಪಂಚಾಯತಿಗಳಲ್ಲಿ 25ರಲ್ಲಿ ಮಳೆಮಾಪಕ ಯಂತ್ರವಿದ್ದು, ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಂದಿತ್ತು. ಈ ಬಗ್ಗೆ ತಾವು ಈ ಹಿಂದೆಯೇ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ, ಅವುಗಳ ದುರಸ್ತಿಗಾಗಿ ಗಮನ ಸೆಳೆದಿದ್ದೆ ಎಂದು ತಿಳಿಸಿದರು.
ಮಳೆಮಾಪಕಗಳ ನಿರ್ವಹಣೆಯಲ್ಲಿನ ವೈಫಲ್ಯ, ಬಿದ್ದ ಮಳೆ ನೀರಿನ ಅಳತೆ ದಾಖಲಿಸಲು ಅಡ್ಡಿಯಾಗಿದೆ. ಇದು ರೈತಾಪಿವರ್ಗಕ್ಕೆ ನೀಡುವ ಬೆಳೆವಿಮೆ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಗೆ ಹೋಲಿಸಿದರೆ, ಹೊಸನಗರ ತಾಲೂಕಿನ ರೈತರು ಬೆಳೆವಿಮೆ ಕಂತಿನಲ್ಲಿ ಶೇ.5 ಹೆಚ್ಚುವರಿ ಹಣ ಕಟ್ಟಿದ್ದಾರೆ. ಆದರೂ ಈ ಬಾರಿ ಕಡಿಮೆ ವಿಮೆಹಣ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದರು.

2021-22ರಲ್ಲಿ ತಾಲೂಕಿನ 4689 ರೈತರು ಬೆಳೆವಿಮೆ ಕೈಗೊಂಡು 8.62 ಕೋಟಿ ರೂ. ವಿಮೆಹಣ ಬಿಡುಗಡೆಯಾಗಿತ್ತು. 2022-23ನೇ ಸಾಲಿನಲ್ಲಿ 5807 ರೈತ ವಿಮೆ ಮಾಡಿಸಿದ್ದು 9 ಕೋಟಿ ರೂ. ಪರಿಹಾರ ಧನ ಸಿಕ್ಕಿತ್ತು ಹಾಗೂ 2023-24ನೇ ಸಾಲಿನಲ್ಲಿ 6878 ರೈತರು ವಿಮೆಗೆ ಮಾಡಿಸಿದ್ದು 15.69 ಕೋಟಿ ರೂ. ವಿಮೆ ಮೊತ್ತ ರೈತರ ಖಾತೆಗೆ ಜಮೆಯಾಗಿತ್ತು. ಈ ಎಲ್ಲಾ ಬಾರಿ ಎಸ್ಬಿಐ ಇನ್ಶುರೆನ್ಸ್ ಕಂಪನಿ ವಿಮೆ ಹಣ ನೀಡಿತ್ತು. ಆದರೆ, ಕಳೆದ ಬಾರಿ ಓರಿಯೆಂಟಲ್ ಇನ್ಶುರೆನ್ಸ್ ಕಂಪನಿ ಬೆಳೆವಿಮೆ ಮಾಡಿತ್ತು. ತಾಲೂಕಿನ ಕೆಲವು ರೈತರಿಗೆ ತಾವು ಕಟ್ಟಿದ್ದ ಪ್ರೀಮಿಯಂ ಹಣದಷ್ಟೇ ವಿಮೆಹಣ ನೀಡಿರುವುದು ನಿರಾಸೆಗೊಳಿಸಿದೆ ಎಂದರು.
ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಕೃಷಿ ಹಾಗೂ ತೋಟಗಾರಿಕೆ ಮೇಲಾಧಿಕಾರಿಗಳು ಈ ಬಗ್ಗೆ ತತಕ್ಷಣ ಗಮನ ಹರಿಸಬೇಕು. ಈ ಬಾರಿ ಬೆಳೆವಿಮೆ ನೀಡುವ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಅಗತ್ಯ ವಿಮೆ ಹಣ ಬಿಡುಗಡೆಗೆ ಮುಂದಾಗಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಸಮಾಜದ ನಿರ್ದೇಶಕ ವಿನಾಯಕ ಚಕ್ಕಾರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





