ಹೊಸನಗರ ; ಹಲವು ವೈವಿಧ್ಯಮಯ ಕಲಿಕಾ ಮಾದರಿ ಅಳವಡಿಕೆಯ ಮೂಲಕ ಶಿಕ್ಷಣದಲ್ಲಿ ಗುರುತರ ಪ್ರಗತಿ ಸಾಧಿಸಲು ಇಲ್ಲಿನ ಶಿಕ್ಷಕರು ಶಕ್ತಿ ಮೀರಿ ಯತ್ನಿಸಿದ್ದಾರೆ ಎಂದು ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಪಿಎಂಶ್ರೀ ಯೋಜನೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 17 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣ ಆಗಲಿರುವ ನೂತನ ಶಾಲಾ ಹೆಚ್ಚುವರಿ ಕೊಠಡಿ ಕಾಮಗಾರಿಗೆ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹಲವಾರು ಸರ್ಕಾರಿ ಶಾಲೆಗಳಿಂದು ಬಾಗಿಲು ಮುಚ್ಚುವ ಹಂತ ತಲುಪಿವೆ. ಆದರೆ, ಈ ಶಾಲೆಯಲ್ಲಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ. ಶಾಲೆಯ ಸುಂದರ ಹೊರಾಂಗಣ ಎಲ್ಲರ ಕಣ್ಮನ ಸೆಳೆಯುವಂತಿದೆ. ಇಲ್ಲಿ ಸರ್ಕಾರದ ಎಲ್ಲಾ ವಿವಿಧ ಅನುದಾನಗಳು ಸದುಪಯೋಗ ಆಗಿವೆ. ಈ ಹಿಂದೆ ತಾವು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 2.50 ಲಕ್ಷ ರೂ. ಹಾಗು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮುಖ್ಯ ರಸ್ತೆಯಿಂದ ಆಟದ ಮೈದಾನ ಸಂಪರ್ಕದ ಕಾಂಕ್ರೆಟ್ ರಸ್ತೆ ನಿರ್ಮಾಣಕ್ಕೆ 5 ಲಕ್ಷ ರೂ. ಹಣ ನೀಡಿದ್ದೆ ಎಂದರು.

ವರ್ಗ ಸಂಘರ್ಷ ದೂರ ಮಾಡಲು ಸರ್ವರಿಗೂ ಶಿಕ್ಷಣದ ಅಗತ್ಯವಿದೆ. ಆ ಮೂಲಕ ಜಾತಿ, ವರ್ಗ ವ್ಯವಸ್ಥೆ ದೂರವಾಗಿ ನಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿ ಮೂಡಲಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ, ಶಿಕ್ಷಣ ಕ್ಷೇತ್ರಕ್ಕೆ ಎಷ್ಟೆಲ್ಲಾ ಹಣ ವ್ಯಯಿಸಿದ ನಂತರವೂ ವರ್ಗ ಸಂಘರ್ಷ ನಿಂತಿಲ್ಲ. ಇಂಗ್ಲಿಷ್ ವ್ಯಾಮೋಹಕ್ಕೆ ಸೋತು ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳದ್ದೇ ಒಂದು ವರ್ಗ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಬಡವರ ಹಾಗು ದಲಿತರ ಮಕ್ಕಳದ್ದೇ ಒಂದು ವರ್ಗವಾಗಿದೆ. ಇದೊಂದು ಶೋಚನೀಯ ಸಂಗತಿಯಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವೇ ಉನ್ನತ ಮಟ್ಟದಲ್ಲಿದೆ. ಪ್ರತಿಭಾವಂತ ಶಿಕ್ಷಕರು ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಇದಕ್ಕೆಲ್ಲಾ ಕಾರಣ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳೆಲ್ಲಾ ಸೇರಿ ಸರ್ಕಾರಿ ಶಾಲೆಗಳಿಗೆ ಉದಾರ ದೇಣಿಗೆ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವತ್ತ ದಿಟ್ಟಹೆಜ್ಜೆ ಇಡಬೇಕಿದೆ. ಖಾಸಗಿ ಶಾಲೆಗಳೇನು ದೇವಲೋಕವಲ್ಲ ಎಂದ ಅವರು, ಉತ್ತಮ ಶಿಕ್ಷಣ ನೀಡುವ ಮೂಲಕ ವರ್ಗ ಸಂಘರ್ಷಕ್ಕೆ ಇತಿಶ್ರೀ ಹಾಡುವಂತಾಗಲಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಬಿ.ಕೆ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಭರತ್ ರಾಜ್, ಬಿಇಒ ವೈ. ಗಣೇಶ್, ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸದಸ್ಯೆ ಜ್ಯೋತಿ ನಾಗರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷೆ ನಾಗರತ್ನ, ಪ್ರಮುಖರಾದ ಲಕ್ಷ್ಮಣಗೌಡ, ಪ್ರಹ್ಲಾದ್ ಜಯನಗರ, ಗೋಪಿನಾಥ್, ನರ‍್ಲೆ ರಮೇಶ್, ಶಿಕ್ಷಕಿ ಸುಕನ್ಯಾ, ನಾಗರತ್ನ, ಪೂರ್ಣಿಮಾ, ಗುತ್ತಿಗೆದಾರ ಅಶ್ವಿನಿಕುಮಾರ್ ಸೇರಿದಂತೆ ಹಲವರು ಇದ್ದರು. ಮುಖ್ಯ ಶಿಕ್ಷಕ ಜಿ.ಎ.ಗುರುಮೂರ್ತಿ ಸ್ವಾಗತಿಸಿ, ಶಿಕ್ಷಕ ಧರ್ಮಪ್ಪ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





