ರಿಪ್ಪನ್‌ಪೇಟೆ ; ಅರಸಾಳು ವಲಯ ವ್ಯಾಪ್ತಿಯ ಕೆರೆಹಳ್ಳಿ, ಮುಡುಬ, ದೂನ, ಹೊಗಳಿಕಮ್ಮನ ಕೆರೆಯ ಸುತ್ತಮುತ್ತ ಒಂಟಿ ಸಲಗ ಭಾನುವಾರ ಮಧ್ಯ ರಾತ್ರಿ ಓಡಾಟ ನಡೆಸಿರುವುದು ರೈತ ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪೇಟೆಗೆ ಸಮೀಪದ ಪೆಟ್ರೋಲ್ ಬಂಕ್ ಹಿಂಭಾಗದ ಕೆರೆಹಳ್ಳಿ ಟೀಕಪ್ಪ ಮತ್ತು ವರದಪ್ಪ ಎಂಬುವರ ಅಡಿಕೆ, ಬಾಳೆ, ಭತ್ತದ ಗದ್ದೆಗೆ ನುಗ್ಗಿ ಬೆಳೆ ಧ್ವಂಸಗೊಳಿಸಿದೆ ಹಾಗೂ ದೂನದ ಹಾಗೂ ಮುಡುಬ ಮಜರೆ ಗ್ರಾಮದಲ್ಲಿ ಒಂಟಿ ಸಲಗ ಓಡಾಡುವ ಮುಲಕ ಬೆಳೆ ಧ್ವಂಸಗೊಳಿಸಿರುವುದು ರೈತ ನಾಗರೀಕರಲ್ಲಿ ಆತಂಕಕ್ಕೆ ಎಡೆಮಾಡಿದೆ.
ರೈತರು ಒತ್ತುವರಿ ಹೆಸರಿನಲ್ಲಿ ಅರಣ್ಯ ನಾಶಗೊಳಿಸುತ್ತಿರುವುದರಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಟ್ಟಂತಾಗಿದೆ ಎಂದು ಹಲವರು ಆಡಿಕೊಳ್ಳುತ್ತಿದ್ದು ಅರಣ್ಯ ಇಲಾಖೆಯವರು ಕಳೆದ ಹದಿನೈದು ದಿನಗಳಿಂದ ಮಲೆನಾಡಿನ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ನೆಮ್ಮದಿಯನ್ನು ಕಳೆದುಕೊಂಡು ಕಾಡು ಸುತ್ತುವಂತಾಗಿದ್ದಾರೆ.

ಒಟ್ಟಾರೆಯಾಗಿ ಕಾಡಾನೆಗಳ ಹಿಂಡು ಈಗಾಗಲೇ ಸಿರಿಗೆರೆ ವನ್ಯಜೀವಿ ವಿಭಾಗದ ವ್ಯಾಪ್ತಿಯ ಬೆಳ್ಳೂರು, ಅರಸಾಳು, ಬಸವಾಪುರ, ಹಾರೋಹಿತ್ತಲು, ಬಟಾಣಿಜಡ್ಡು, ಕೊಳವಂಕ, ತಮ್ಮಡಿಕೊಪ್ಪ, ಹಾರಂಬಳ್ಳಿ, ಬರುವೆ, ಕೆರೆಹಳ್ಳಿ, ಮಸರೂರು, ಮಾಣಿಕೆರೆ, ಕಮದೂರು, ಆಲವಳ್ಳಿ, ಹೊನ್ನಕೊಪ್ಪ, ಗ್ರಾಮಗಳಲ್ಲಿ ರೈತರ ತೋಟಕ್ಕೆ ಆನೆ ನುಗ್ಗಿ ದಾಳಿ ನಡೆಸಿ ಬೆಳೆ ನಾಶಗೊಳಿಸಿರುತ್ತದೆ.
ವಲಯ ಅರಣ್ಯಾಧಿಕಾರಿ ಶರಣಯ್ಯ ಪಾಟೀಲ್ ಮತ್ತು ಸಿಬ್ಬಂದಿವರ್ಗ ಆನೆ ದಾಳಿಯಿಂದ ಹಾನಿಗೀಡಾದ ಜಮೀನಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿ ಈಗಾಗಲೇ ಒಂಟಿ ಸಲಗ ಹೋದ ದಾರಿಯನ್ನು ಪತ್ತೆ ಮಾಡಿ ಅದನ್ನು ಓಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಮಾಧ್ಯಮದವರಿಗೆ ವಿವರಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





