ಹೊಂಬುಜ : “ಪ್ರತಿಯೋರ್ವರು ಸಮರ್ಪಕ ವಿದ್ಯಾಭ್ಯಾಸದತ್ತ ಆದ್ಯತೆ ನೀಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕ್ಲಪ್ತ ಸಮಯದಲ್ಲಿ ಪ್ರೋತ್ಸಾಹ ನೀಡುವಂತಾದಾಗ ಮಕ್ಕಳಲ್ಲಿ ಪ್ರತಿಭೆ, ಸಂಯಮ, ಶಿಸ್ತು ಕಾಣಬಹುದು” ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ತಿಳಿಸಿದರು.
ಅವರು ಶ್ರೀಮಠದ ಟ್ರಸ್ಟ್ನ ಅಧೀನದಲ್ಲಿರುವ ಪರಂಜ್ಯೋತಿ ಆಂಗ್ಲ ಮಾಧ್ಯಮ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅನುಗ್ರಹ ಪ್ರವಚನ ನೀಡುತ್ತಾ, “ಉತ್ತಮ ಸಂಸ್ಕಾರಯುತ ಜೀವನ ನಿರ್ವಹಣೆಗೆ ಹಾಗೂ ಸಾಧನೆಯ ಗುರಿ ತಲುಪಲು ಶಿಕ್ಷಣಾಲಯದ ಉಪಾಧ್ಯಾಯರು, ಶಿಕ್ಷಕಿಯರು ನೀಡುವ ಮಾರ್ಗದರ್ಶನ ಅಮೂಲ್ಯವಾದುದು” ಎಂದ ಅವರು “ಶಾಲಾಭಿವೃದ್ಧಿಗೆ ಸಕಾರಾತ್ಮಕ ಸಹಕಾರವಿದೆ” ಎಂದು ಆಶಿಸಿದರು.

9ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ವಿವಿಧ ಆಟೋಟ-ಸಾಹಿತ್ಯ-ಪ್ರಬಂಧ, ಸ್ಪರ್ಧಾ ವಿಜೇತರನ್ನು ಹಾಗೂ ಉತ್ತಮ ಅಂಕ ಗಳಿಸಿದವರನ್ನು ಪುರಸ್ಕರಿಸಿ, ಆಶೀರ್ವದಿಸಿದರು. ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಸಿ.ಆರ್.ಪಿ. ತೀರ್ಥಪ್ಪ ಹಾಗೂ ಟ್ರಸ್ಟಿ ರತ್ನಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಶಾಲಾ ಆಡಳಿತ ಮಂಡಳಿಯ ಜಿ. ಮಂಜಪ್ಪ ಶಾಲಾ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾವತಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಮುದ ನೀಡಿತ್ತು. ಪೋಷಕರು ಊರ ವಿದ್ಯಾಭಿಮಾನಿಗಳು ಆಗಮಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





