ಹೊಸನಗರ : ತಾಲ್ಲೂಕಿನ ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ.ಗಳ ಅವ್ಯವಹಾರ ಕುರಿತು ತಾಲೂಕು ದೀವರ ವಿದ್ಯಾವರ್ಧಕ (ಈಡಿಗ) ಹಿತರಕ್ಷಣಾ ವೇದಿಕೆ ಇದೇ 26ರ ಗುರುವಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆ ವೇಳೆ ನಡೆಸಲು ಉದ್ದೇಶಿಸಿದ್ದ ಕಪ್ಪು ಬಾವುಟ ಪ್ರದರ್ಶನವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಡಾ. ಸೊನಲೆ ಶ್ರೀನಿವಾಸ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ದೀವರ ಸಮಾಜದ ಹಿರಿಯ ಚೇತನ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ಮೇರೆಗೆ ಇದೇ ಡಿಸೆಂಬರ್ 31ರಂದು ಪಟ್ಟಣದ ಮಾವಿನಕೊಪ್ಪದಿಂದ ಈಡಿಗ ಸಭಾಭವನದವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದಿದ್ದಾರೆ.
ಡಿಸೆಂಬರ್ 31 ರೊಳಗೆ ತಾಲೂಕು ಈಡಿಗ ಸಂಘದ ಸ್ವಘೋಷಿತ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ, ಲೆಕ್ಕಪತ್ರ ತಪಾಸಣೆಗೆ ಕಾಗೋಡು ತಿಮ್ಮಪ್ಪ ಅಂತಿಮ ಗಡುವು ನಿಗದಿಪಡಿಸಿದ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಮುಂದುಡಲಾಗಿದೆ. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ವೇದಿಕೆ ಭಿನ್ನ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಿತರಕ್ಷಣಾ ವೇದಿಕೆಯ ಮುಖಂಡರು ಈ ಕುರಿತು ಶಾಸಕ ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಗಮನಾರ್ಹ ಸಂಗತಿ ಎಂದಿದ್ದಾರೆ.
ಈ ವೇಳೆ ವೇದಿಕೆಯ ಕಾರ್ಯದರ್ಶಿ ಎನ್.ಇ. ಸ್ವಾಮಿ, ಗೌರವಾಧ್ಯಕ್ಷ ಮಂಡಾನಿ ಎಂ.ಕುಮಾರ್, ಉಪಾಧ್ಯಕ್ಷ ಹಾರೆಕೊಪ್ಪ ಹೆಚ್.ಆರ್. ಶ್ರೀಧರ್, ವಾಸಪ್ಪ ಮಾಸ್ತಿಕಟ್ಟೆ, ಭಾಸ್ಕರ ಮುಳುಗೇರಿ, ಮಾಕನಕಟ್ಟೆ ಗಣಪತಿ, ಯಡಗುಡ್ಡೆ ಷಣ್ಮುಖಪ್ಪ, ಕಾಪಿ ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





