ಹೊಸನಗರ ; ಇಲ್ಲಿನ ಆರ್ಯ ಈಡಿಗ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಕುರಿತಂತೆ ತಮ್ಮ ಆಮರಣಾಂತ ಉಪವಾಸ ಪ್ರತಿಭಟನೆ ಇದೇ ಡಿಸೆಂಬರ್ 31 ರ ಬೆಳಗ್ಗೆ 10 ಗಂಟೆಗೆ ಬಸ್ ಸ್ಟ್ಯಾಂಡ್ ಮುಂಭಾಗದ ಸಂಘದ ಕಾಂಪ್ಲೆಕ್ಸ್ ಮುಂಭಾಗ ಅಬಾಧಿತವಾಗಿ ನಡೆಯಲಿದೆ ಎಂದು ಮಾಜಿ ಶಾಸಕ, ಹಿರಿಯ ರಾಜಕೀಯ ಮುತ್ಸದಿ ಬಿ.ಸ್ವಾಮಿರಾವ್ ತಿಳಿಸಿದರು.

ಸೋಮವಾರ ಅವರ ಸ್ವಗೃಹದಲ್ಲಿ ಮಾತನಾಡಿದ ಅವರು, ಈ ಹಿಂದೆ ಡಿಸೆಂಬರ್ 26ಕ್ಕೆ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆ. ಆದರೆ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೇರಿದಂತೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಮಾಜಿ ಶಾಸಕ ಜಿ.ಡಿ.ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸಮಾಜದ ಪ್ರಮುಖರಾದ ಷಣ್ಮುಖಪ್ಪ ಇತರರು ಆರ್ಯ ಈಡಿಗ ಸಭಾಭವನದ ಉದ್ಘಾಟನೆ ಕಾರ್ಯಕ್ರಮ ನೆರವೇರುವವರೆಗೂ ಯಾವುದೇ ಹೋರಾಟ ನಡೆಸದೆ, ಶಾಂತಿ ಕಾಯ್ದುಕೊಳ್ಳಲು ವಿನಂತಿ ಮಾಡಿದ್ದರು. ಈಗ ಸಮಾಜದ ಹೊಸ ಕಟ್ಟಡ ಲೋಕಾರ್ಪಣೆಗೊಂಡಿದೆ. ಆದರೆ, ಸಂಘದಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಯಬೇಕಿದೆ. ಈ ಕಾರಣಕ್ಕೆ ಹಾಲಿ ಆಡಳಿತ ಸಮಿತಿ ಕೂಡಲೇ ವಜಾ ಗೊಳಿಸಿ, ನೂತನ ಆಡಳಿತ ಮಂಡಳಿ ಆಯ್ಕೆ ನಡೆಸಬೇಕು. ತಾವು ಡಿ.31 ನಡೆಸುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸಮಾಜದ ಪ್ರಮುಖರು ಈ ಹಿಂದೆ ನನಗೆ ನೀಡಿದ ವಾಗ್ದಾನದಂತೆ ಸಂಪೂರ್ಣ ಸಹಕಾರ ನೀಡುವ ಮೂಲಕ ಸಮಾಜದ ಆಸ್ತಿ ಕಾಪಾಡಲು ಸಹಕರಿಸಬೇಕು ಎಂದರು.

ತಪ್ಪಿದಲ್ಲಿ ಹೋರಾಟದ ಸ್ವರೂಪವೇ ಬದಲಾಗಬಹುದು ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್ ತಮ್ಮ ತಂದೆಯವರ ಹೋರಾಟಕ್ಕೆ ತಾವು ಸಂಪೂರ್ಣ ಸಹಕಾರ ನೀಡುವ ಜೊತೆಗೆ ಸಮಾಜದ ಸಮಾನ ಮನಸ್ಕರು ಅಂದು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





