ಹೊಸನಗರ ; ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಕ್ಷೇತ್ರವನ್ನು ರಾಜ್ಯ ಮಟ್ಟದ ಒಂದು ಧಾರ್ಮಿಕ ಪ್ರವಾಸಿ ತಾಣವಾಗಿಸುವ ಬಯಕೆ ತಮ್ಮದಾಗಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರ ವಂತಿಕೆ ಹಣದಲ್ಲಿ ನೂತನ ಶಿಲಾಮಯ ದೇಗುಲ ನಿರ್ಮಾಣ ಸಾಧ್ಯವಾಯಿತು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಬಿ. ಸ್ವಾಮಿರಾವ್ ಹೇಳಿದರು.

ಕೋಡೂರು ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಾಲಯಕ್ಕೆ ಮಂಗಳವಾರ ಅವರು ಭೇಟಿ ನೀಡಿ, ದೇವಿಯ ದರ್ಶನ ಪಡೆದು, ನೂತನ ವ್ಯವಸ್ಥಾಪನ ಸಮಿತಿ ಸದಸ್ಯರಿಗೆ ಶುಭ ಕೋರಿ ಮಾತನಾಡಿದರು.

ಮಲೆನಾಡು ದೀವರ – ಈಡಿಗ ಜನಾಂಗದ ಮನೆ ದೇವರಾದ ಶ್ರೀ ಜೇನುಕಲ್ಲಮ್ಮ ದೇವಸ್ಥಾನಕ್ಕೆ 80ರ ದಶಕದಲ್ಲಿ ತಾವು ಶಾಸಕನಾಗಿದ್ದಾಗ ಜನಪರ ಕಾಳಜಿಯಿಂದ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೆ. ಜಾತ್ರಾ ಮಹೋತ್ಸವ, ವಿಶೇಷ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸುವ ಕಾರಣ ಸುಸಜ್ಜಿತ ಸಭಾಭವನ ಸಹ ನಿರ್ಮಾಣವಾಯಿತು. ಪ್ರಸಕ್ತ ಸಾಲಿನಲ್ಲಿ ಭಕ್ತರ ಆಶಯ, ಸಹಕಾರದಿಂದ 2 ಕೋಟಿ ರೂ. ವೆಚ್ಚದಲ್ಲಿ ನೂತನ ಶಿಲಾಮಯ ದೇಗುಲ ಲೋಕಾರ್ಪಣೆಗೊಂಡಿದೆ.

ಇಲ್ಲಿನ ಹಳೇ ಅಮ್ಮನಘಟ್ಟ ಹಾಗು ಹೊಸ ಅಮ್ಮನಘಟ್ಟದ ನಡುವೆ ರೋಪ್ ವೇ ನಿರ್ಮಾಣ ಮಾಡುವ ನನ್ನ ಆಸೆ ಕೈಗೂಡಲಿಲ್ಲ. ಶ್ರೀ ಕ್ಷೇತ್ರವನ್ನು ಪ್ರಸಿದ್ದ ಧಾರ್ಮಿಕ ಯಾತ್ರಾ ಹಾಗೂ ಪ್ರವಾಸಿ ತಾಣವಾಗಿಸುವ ಬಯಕೆ ತಮ್ಮದಾಗಿದ್ದು, ನೂತನ ವ್ಯವಸ್ಥಾಪನ ಸಮಿತಿ ಈ ಕುರಿತು ಕಾರ್ಯೋನ್ಮುಖವಾಗಲಿ. ನನ್ನ ಸಲಹೆ, ಸಹಕಾರ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿದೆ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನ ವ್ಯವಸ್ಥಾಪನಾ ಸಮಿತಿಯು ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿತು.
ನೂತನ ಅಧ್ಯಕ್ಷ ಕಲಗೋಡು ರತ್ನಾಕರ್ ಮಾತನಾಡಿ, ಸ್ವಾಮಿರಾವ್ ಅವರಂತಹ ಹಿರಿಯರ ಸಲಹೆ, ಸಹಕಾರ, ಮಾರ್ಗದರ್ಶನ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾಗಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ನೀಲಿ ನಕಾಶೆ ತಯಾರಾಗಿದ್ದು, ಸರ್ಕಾರದ ಅನುದಾನ ಬಿಡುಗಡೆಯ ಬಳಿಕ ಹಲವು ಜನೋಪಯೋಗಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ ಎಂದರು.

ಈ ವೇಳೆ ಸಮಿತಿಯ ನೂತನ ಸದಸ್ಯರಾದ ಗುರುರಾಜ್, ಎಂ.ಪಿ.ಸುರೇಶ್, ಉಮೇಶ್ ಹೂವಿನ ಕೋಣೆ, ರುದ್ರಯ್ಯಗೌಡ, ಯೋಗೇಂದ್ರಪ್ಪ, ಶಿವಮ್ಮ, ಅರ್ಚಕ ಭಾಸ್ಕರ ಜೋಯ್ಸ್, ಹೇಮ ಜನಾರ್ದನ ಸೇರಿದಂತೆ ಪ್ರಮುಖರಾದ ಹೆಬ್ಬೈಲು ಕಲ್ಯಾಣಪ್ಪ ಗೌಡ, ಕೋಡೂರು ವಿಜೇಂದ್ರರಾವ್, ಸುಧೀರ್ ಭಟ್, ಪುಟ್ಟಪ್ಪ, ದೇವರಾಜ್, ಗಣೇಶ್ ಮೊದಲಾದವರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





