ಶಿವಮೊಗ್ಗ ; ನಗರದ ವಿಕಾಸ ರಂಗ ಹಾಗೂ ಕರ್ನಾಟಕ ಸಂಘ ಇವರ ಸಹಯೋಗದಲ್ಲಿ ಕರ್ನಾಟಕ ಸಂಘದ ಸಭಾ ಭವನದಲ್ಲಿ ಜಿಲ್ಲೆಯ ಹಿರಿಯ ಸಾಧಕರಿಗೆ ಶನಿವಾರ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ವಿಕಾಸ ರಂಗದ ಸಂಸ್ಥಾಪಕ ದಿ|| ಕೆ.ಸಿ.ಪ್ರಭಾಕರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘದ ಅಧ್ಯಕ್ಷ ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 80 ದಶಕದಲ್ಲಿ ದಿವಂಗತ ಪ್ರಭಾಕರ್ ಒಳ್ಳೆಯ ಸಂಘಟನಾ ಚತುರರಾಗಿದ್ದು ವಿವಿಧ ಬಗೆಯ ನೂರಾರು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ನಾಟಕ, ನೃತ್ಯ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ನಗರದಾದ್ಯಂತ ಮನೆ ಮಾತಾಗಿದ್ದರು. ಕುಳ್ಳರ ಸ್ಪರ್ಧೆ, ಲಂಬುಗಳ ಸ್ಪರ್ಧೆ, ದಪ್ಪ ಮೀಸೆ, ಉದ್ದ ಮೀಸೆ, ಉದ್ದ ಜಡೆ ಬಿಟ್ಟವರ ಸ್ಪರ್ಧೆ ಸೇರಿದಂತೆ ಅನೇಕ ಬಗೆಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾವೊಬ್ಬ ವಿಭಿನ್ನ ವ್ಯಕ್ತಿತ್ವ ಹೊಂದಿದ ವ್ಯಕ್ತಿ ಎಂಬಂತೆ ಸಮಾಜದಲ್ಲಿ ಗುರುತಿಸಿ ಕೊಂಡಿದ್ದರು.
1988 ರಲ್ಲಿ ಅವರೇ ಆರಂಭಿಸಿದ ವಿಕಾಸ ರಂಗ ಸಂಘಟನೆಯು ಇತ್ತೀಚೆಗೆ ನಾಲ್ಕು ದಶಕಗಳ ದಾಪುಗಾಲು ಹಾಕುತ್ತಿದೆ. ಪ್ರಭಾಕರ್ ಅವರಂತ ಧೀಮಂತ ರಂಗಾಸಕ್ತ ವ್ಯಕ್ತಿಯ ಸವಿ ನೆನಪಿಗಾಗಿ ಜಿಲ್ಲೆಯ ಹಿರಿಯ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಮೂಲಕ ಪ್ರಭಾಕರ್ ಅವರ ಕಾರ್ಯ ಚಟುವಟಿಕೆಗಳನ್ನು ಮತ್ತೊಮ್ಮೆ ನಾವೆಲ್ಲಾ ಮೆಲಕು ಹಾಕುವ ಸುಯೋಗ ಇಂದು ನಮ್ಮದಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಕಾಸ ರಂಗದ ಅಧ್ಯಕ್ಷೆ ಹೆಚ್. ವಿಶಾಲಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ಅಂಕಣ ಬರಹಗಾರ ಎಂ.ಎಸ್. ಸುಂದರರಾಜ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹೊಸನಗರ ತಾಲೂಕಿನ ಮಾಜಿ ಶಾಸಕ ಬಿ.ಸ್ವಾಮಿರಾವ್ (95) ಅವರಿಗೆ ‘ಸಮಾಜವಾದದ ಸಂತ’ ಎಂಬ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಅಲ್ಲದೇ, ಶಿವಮೊಗ್ಗದ ಖ್ಯಾತ ಹಿರಿಯ ವಕೀಲ ಬಿ.ಎನ್ ಕೃಷ್ಣಮೂರ್ತಿ(95), ಕಮಲಾ ನೆಹರು ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಪಂಚಾಕ್ಷರಿ (95), ರೈತ ಮುಖಂಡ ಡಾ. ಚಿಕ್ಕಸ್ವಾಮಿ (95) ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಮಾರ್ಷಲ್ ಶರಾಂ, ವಿಕಾಸ ರಂಗದ ಕಾರ್ಯದರ್ಶಿ ವಾಗೀಶ್, ರಾಘವೇಂದ್ರ ಹೊಸೂಡಿ, ಪತ್ರಕರ್ತ ಶ್ರೀಕಂಠ ಹೆಚ್.ಆರ್. ಮೊದಲಾದವರು ಉಪಸ್ಥಿತರಿದ್ದರು. ಶಾಂತ ಶೆಟ್ಟಿ ನಿರೂಪಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





