ಮಾನವನ ಆಚರಣೆಯಲ್ಲಿವೆ ಧರ್ಮದ ಉಳಿವು ಅಳಿವು ; ರಂಭಾಪುರಿ ಶ್ರೀಗಳು

0 181

ಎನ್‌.ಆರ್.ಪುರ: ಮನುಷ್ಯ ಜೀವನ ಪವಿತ್ರ ಪಾವನ. ಅರಿತು ಬಾಳುವುದರಲ್ಲಿ ಬದುಕಿನ ಶ್ರೇಯಸ್ಸಿದೆ. ಧರ್ಮದ ಉಳಿವು ಮತ್ತು ಅಳಿವು ಮನುಷ್ಯನ ಆಚರಣೆಯಲ್ಲಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ತೆಲಂಗಾಣದ ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಪ್ರಾಣ ಯೌವನ ಕಾಲ ಒಮ್ಮೆ ಕಳೆದರೆ ಮತ್ತೆಂದೂ ತಿರುಗಿ ಬರಲಾರವು. ಸದ್ವಿದ್ಯೆ, ಉತ್ತಮ ಸಂಬAಧ ಮತ್ತು ಆದರ್ಶ ಸ್ನೇಹ ಯಾವಾಗಲೂ ನಮ್ಮೊಂದಿಗೆ ಇದ್ದರೆ ಬಾಳೆಲ್ಲ ಸುಖಮಯ. ಚಿಂತೆ ಚಿಂತನೆಗೊಂಡಾಗ ಬಾಳು ಉಜ್ವಲಗೊಳ್ಳಲು ಸಾಧ್ಯ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣ ಎರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವನಾಶಗೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಜ್ಞಾನ ಸಂಪತ್ತು ಜೀವನ ವಿಕಾಸಕ್ಕೆ ಮೂಲಾಧಾರವಾಗಿದೆ ಎಂದರು.

ಮೇಹಕರ ಹಿರೇಮಠದ ರಾಜೇಶ್ವರ ಶ್ರೀಗಳು ಮಾತನಾಡಿ ಮನಸ್ಸು ಇದ್ದರೆ ಮಾರ್ಗ ಯಾವಾಗಲೂ ಇದ್ದೇ ಇರುತ್ತದೆ. ಮನುಷ್ಯ ಭೌತಿಕ ಸಂಪತ್ತಿನ ಜೊತೆಗೆ ಆಧ್ಯಾತ್ಮ ಜ್ಞಾನವನ್ನು ಸಂಪಾದಿಸಿ ಜೀವನ ಸಾರ್ಥಕಗೊಳಿಸಬೇಕಾಗಿದೆ ಎಂದರು.

ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶ್ರೀಗಳು, ಮಂಗಲಗಿ ಮಠದ ಡಾ|| ಸೋಮನಾಥ ಶ್ರೀಗಳು, ತೊಟ್ನಳ್ಳಿ ಡಾ.ತ್ರಿಮೂರ್ತಿ ಶ್ರೀಗಳು, ಲಿಂಗಸುಗೂರು ಮಾಣಿಕ್ಯೇಶ್ವರಿ ಆಶ್ರಮದ ಮಾತಾ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಮರಣಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ಹೈದರಾಬಾದಿನ ವೀರಶೈವ ಸಮಾಜದ ಅಧ್ಯಕ್ಷ ವೀರಮಲ್ಲೇಶ, ಜಂಗಮ ಸಮಾಜದ ಅಧ್ಯಕ್ಷ ವಿಶ್ವಂ, ಅಣ್ಣಾರಾವ ಬಿರಾದಾರ, ಶಿವಶರಣಪ್ಪ ಸೀರಿ, ಗುರುಪಾದಪ್ಪ ಕಿಣಗಿ ಪಾಲ್ಗೊಂಡಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶ್ರೀಗಳು ನಿರೂಪಿಸಿದರು. ಗಿರಿಯಪ್ಪ ಮುತ್ಯಾ ಅವರು ಅನ್ನದಾಸೋಹ ಸೇವೆ ಸಲ್ಲಿಸಿದರು.

ಪ್ರಾತಃಕಾಲ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಅಭಿಷೇಕ, ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಜರುಗಿತು. ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶುಭ ಹಾರೈಸಿದರು.

Leave A Reply

Your email address will not be published.