ಹೊಂಬುಜದಲ್ಲಿ ಸಂಭ್ರಮದ ಯುಗಾದಿ ಆಚರಣೆ | ಯಶಸ್ಸಿನತ್ತ ಸದೀಚ್ಛೆ ಪರಾಭವ ಸಂವತ್ಸರ ಫಲ ನೀಡಲಿ ; ಶ್ರೀಗಳು

Written by Mahesha Hindlemane

Published on:

ಹೊಂಬುಜ ; ನವಸಂವತ್ಸರ ಫಲಗಳನ್ನು ಪಂಚಾಂಗ ಶ್ರವಣ ಮಾಡುವ ಮೂಲಕ ಅತಿಶಯ ಶ್ರೀಕ್ಷೇತ್ರ ಹೊಂಬುಜ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರೀ ಪರಾಭವ ಸಂವತ್ಸರ ಆರಂಭಗೊಳ್ಳುವ ಸುದಿನ ಯುಗಾದಿಯಂದು ಭಕ್ತರು ತಮ್ಮ ಪ್ರಾರ್ಥನೆ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು “ಫಲಾಫಲ ಅವಲೋಕಿಸುವುದು ನಮ್ಮೆಲ್ಲರ ಆಶಯವಾಗಿದೆ. ನಿಜವಾಗಿ ಪ್ರತಿಯೋರ್ವರು ಆಯಾ ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆ ತೋರುವುದರಿಂದ ಜೀವನದಲ್ಲಿ ಶಾಂತಿ-ನೆಮ್ಮದಿ ಲಭಿಸಬಲ್ಲದು” ಎನ್ನುತ್ತಾ “ಯಶಸ್ಸಿನತ್ತ ಸದೀಚ್ಛೆ ಪರಾಭವ ಸಂವತ್ಸರವು ಫಲ ನೀಡಲಿ” ಎಂದು ಭಕ್ತರನ್ನು ಹರಸಿದರು.

ಪಂಚಾಂಗ ಶ್ರವಣದ ಮಹತ್ವವನ್ನು ವಿವರಿಸುತ್ತಾ “ಸ್ವಗ್ರಾಮ, ರಾಜ್ಯ, ರಾಷ್ಟ್ರ ಅಭಿವೃದ್ಧಿಯಾಗಲು ಪಣ ತೊಡಲು ತಿಳಿಸಿ ಆದಾಯ-ವ್ಯಯಗಳು ಸಮತೋಲನದಲ್ಲಿರಲಿ” ಎಂಬ ಧರ್ಮ ಸಂದೇಶ ಪ್ರಕಟಿಸಿದರು.

ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀಕ್ಷೇತ್ರಪಾಲ, ಶ್ರೀ ನಾಗಸನ್ನಿಧಿಯಲ್ಲಿ ಆಗಮೋಕ್ತ ವಿಧಿಗಳು ಜರುಗಿದವು.

ಶ್ರೀಕ್ಷೇತ್ರದ ಎಲ್ಲ ಜಿನಮಂದಿರಗಳಲ್ಲಿ ಪ್ರಾತಃಕಾಲದಲ್ಲಿ ನಿತ್ಯವಿಧಿ ಸಹಿತ ಪೂಜಾ ವಿಧಾನಗಳು ನೆರವೇರಿದವು. ಊರ ಪರವೂರ ಭಕ್ತರು, ಶ್ರೀ ಕುಂದಕುಂದ ಗುರುಕುಲ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದ ಸದಸ್ಯೆಯರು ಪಾಲ್ಗೊಂಡಿದ್ದರು.

ಪದ್ಮರಾಜ ಇಂದ್ರರವರು ಸ್ತೋತ್ರ ಪಠಿಸಿ ಪಂಚಾಂಗ ವಾಚಿಸಿದರು. ಶ್ರೀಗಳವರು ಶ್ರೀಫಲ ನೀಡಿ ಹರಸಿದರು.

Leave a Comment