ಮಂಗನ ಕಾಯಿಲೆಗೆ ತೀರ್ಥಹಳ್ಳಿಯಲ್ಲಿ 2ನೇ ಬಲಿ !

Written by Mahesha Hindlemane

Published on:

ತೀರ್ಥಹಳ್ಳಿ ; ಮಂಗನ ಕಾಯಿಲೆಗೆ ತಾಲೂಕಿನಲ್ಲಿ ಈ ವರ್ಷ 2ನೇ ಬಲಿಯಾಗಿದ್ದು, ಗುರುವಾರ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅರಳಸುರುಳಿ ಸಮೀಪದ ತಟ್ಟಿಕೇವಿ ಗ್ರಾಮದ 60 ವರ್ಷದ ಮಹಿಳೆ ಗುಲಾಬಿ ಶೆಟ್ಟಿ (ನಾಗುಶೆಡ್ತಿ) ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗುಲಾಬಿ ಅವರು ಕೆಎಫ್‌ಡಿ ರೋಗ ಉಲ್ಬಣಗೊಂಡ ಸ್ಥಿತಿಯಲ್ಲಿ ಮಂಗಳವಾರ ತೀರ್ಥಹಳ್ಳಿ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕಿಡ್ನಿ ಸಮಸ್ಯೆ ಕೂಡ ಇತ್ತು ಎಂದು ಹೇಳಲಾಗಿದೆ.

ಈ ಮೊದಲು ಕಟಗಾರು (ಕಟ್ಟೆಹಕ್ಲು) ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿಯ ಯುವಕ ಕೆಎಫ್‌ಡಿ ಸೋಂಕಿನಿಂದ ಸಾವಿಗೀಡಾಗಿದ್ದ. ತಾಲೂಕಿನಲ್ಲಿ 29 ಪ್ರಕರಣ ದಾಖಲಾಗಿದ್ದು, ಜನವರಿಯಿಂದ ಈವರೆಗೆ ಇಬ್ಬರು ಮೃತರಾಗಿದ್ದಾರೆ.

ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ 5 ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ 3 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ.

ಜೆಸಿ ಆಸ್ಪತ್ರೆಯಲ್ಲಿ 5 ರೋಗಿಗಳಿದ್ದು, ಗುಣಮುಖರಾಗಿ ಮನೆಗೆ ಹೋಗಿದ್ದ ಇಬ್ಬರು ಮತ್ತೆ ಜ್ವರ ಮರುಕಳಿಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅರವಿಂದ್ ತಿಳಿಸಿದ್ದಾರೆ.

Leave a Comment