ಮಾನವೀಯ ಸಂಬಂಧಗಳು ಸದೃಢಗೊಳ್ಳಬೇಕು ; ರಂಭಾಪುರಿ ಜಗದ್ಗುರುಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಸುಖ ದುಃಖಗಳ ಸಮ್ಮಿಶ್ರಣವೇ ಜೀವನ. ಸತ್ಯ ಶಾಂತಿ ಎಲ್ಲರ ಬಾಳಿಗೆ ಅಗತ್ಯ. ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವ ಶ್ರೇಯಸ್ಸಿಗೆ ದಾರಿದೀಪ. ಆಧುನಿಕತೆ-ನವ ನಾಗರಿಕತೆಯ ನೆಪದಲ್ಲಿ ಮನುಷ್ಯ-ಮನುಷ್ಯರ ಸಂಬಂಧಗಳು ಸಡಿಲಗೊಳ್ಳುತ್ತಿದ್ದು ಉದಾತ್ತ ಮಾನವೀಯ ಸಂಬಂಧಗಳನ್ನು ಸದೃಢಗೊಳಿಸುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಬುಧವಾರ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ಜರುಗಿದ ಲಿಂ. ಬಿ.ಕೆ.ಪಾರ್ವತಮ್ಮನವರ ಶ್ರದ್ಧಾಂಜಲಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಇಂದು ಕೂಡು ಕುಟುಂಬಗಳು ಕಡಿಮೆಯಾಗುತ್ತಿದ್ದರೂ ಪರಸ್ಪರ ಸಂಬಂಧಗಳು ಬೆಳೆದುಕೊಂಡು ಬರುವ ಅವಶ್ಯಕತೆ ಇದೆ. ಲಿಂ. ಬಿ.ಕೆ. ಪಾರ್ವತಮ್ಮನವರು ಧರ್ಮದಲ್ಲಿ ಪೀಠಾಚಾರ್ಯರಲ್ಲಿ ಶ್ರದ್ಧಾ ಮನೋಭಾವನೆ ಹೊಂದಿದ್ದರು. ತಮ್ಮ ಮಕ್ಕಳಲ್ಲಿಯೂ ಕೂಡ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜ ಸೇವೆಗೆ ಧರ್ಮ ಸೇವೆಗೆ ಅಣಿಗೊಳಿಸಿದ್ದನ್ನು ಮರೆಯುವಂತಿಲ್ಲ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ.ರಾಘವೆಂದ್ರ, ಮಲೆನಾಡಿನ ಜನತೆಯ ಭಕ್ತಿ ಶ್ರದ್ಧಾ ಮನೋಭಾವ ದೊಡ್ಡದು. ಮೇ 17ರಂದು ಶಿವಮೊಗ್ಗ ನಗರದಲ್ಲಿ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಿಂದ ನಡೆಸಲು ತೀರ್ಮಾನಿಸಿದ್ದು ಎಲ್ಲ ಜನತೆ ಪಾಲ್ಗೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಹೆತ್ತ ತಾಯ್ತಂದೆಯವರ ಸೇವೆ ಮಾಡುವ ಅವಕಾಶ ಪಡೆದವರು ಸೌಭಾಗ್ಯವಂತರು. ಕುಟುಂಬದಲ್ಲಿ ಹೊಂದಾಣಿಕೆಯ ಮನೋಭಾವ ಹೊಂದುವುದು ಮುಖ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಶ್ರೇಷ್ಠವಾಗಿದೆ. ಮಕ್ಕಳಿಗೆ ನೀಡುವ ಸಂಸ್ಕಾರವು ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಲ್ಲದು. ಮಕ್ಕಳನ್ನು ಪೋಷಣೆ ಮಾಡುವಾಗ ತಾಯಿ ನೀಡುವ ಪ್ರೀತಿಗೆ ಸಮಾನವಾದುದು ಮತ್ತೊಂದಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಮಾನವ ಕುಲಕೋಟಿಗೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಲಿಂ. ಬಿ.ಕೆ. ಪಾರ್ವತಮ್ಮನವರು ಮಾಡಿದ ಧರ್ಮ ಕಾರ್ಯಗಳನ್ನು ಎಂದಿಗೂ ಮರೆಯುವಂತಿಲ್ಲ ಎಂದರು.

ಶ್ರೀ ಕಾಶಿ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ, ಮಲೆನಾಡಿನ ಪ್ರಾಂತ್ಯ ಪ್ರದೇಶದಲ್ಲಿ ಶ್ರೀ ಜಗದ್ಗುರು ಪಂಚ ಪೀಠಾಧೀಶರನ್ನು ಕರೆತಂದು ಈ ಭಾಗದ ಜನತೆಗೆ ಆಶೀರ್ವಾದ ಕೊಡಿಸಿದ ಕೀರ್ತಿ ಕೆ.ಆರ್.ಪ್ರಕಾಶ ಮತ್ತು ಕುಟುಂಬದವರಿಗೆ ಸಲ್ಲುತ್ತದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ, ಆರ್.ಎಂ. ಮಂಜುನಾಥಗೌಡ ಸೇರಿದಂತೆ ಹಲವಾರು ಗಣ್ಯರು ಮತ್ತು ಮಳಲಿ, ಕೋಣಂದೂರು, ಕವಲೇದುರ್ಗ, ಬೀರೂರು, ಬಿಳಿಕಿ, ತೊಗರ್ಸಿ ಮಠಗಳ ಶ್ರೀಗಳು ಹಾಗೂ ಗೌರಿಗದ್ದೆಯ ವಿನಯ ಗುರೂಜಿ ಉಪಸ್ಥಿತರಿದ್ದರು.

ಕೆ.ಆರ್.ಪ್ರಕಾಶ ಸಹೋದರರು ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರಿಗೆ ಗೌರವ ಗುರುವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ, ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ರಚಿಸಿದ ಧರ್ಮ ದುರಂಧರೆ ಕೃತಿ ಬಿಡುಗಡೆಗೊಳಿಸಲಾಯಿತು. ಕೆ.ಆರ್.ಪ್ರಕಾಶ ಸ್ವಾಗತಿಸಿದರು. ಶಿವಮೊಗ್ಗ ಶಾಂತಾ ಆನಂದ ನಿರೂಪಿಸಿದರು.

Leave a Comment