ರಿಪ್ಪನ್‌ಪೇಟೆಯಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ | ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ಯಾಂಪ್ಕೋ ದಿಟ್ಟ ಹೆಜ್ಜೆ ; ಸತೀಶ್ಚಂದ್ರ ಅಭಿಮತ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆಯು ಉತ್ತಮ ಇಳುವರಿ ಬರಲು ಎಲೆಚುಕ್ಕಿ ರೋಗದ ನಿಯಂತ್ರಣ ಅಗತ್ಯ. ಈ ನಿಟ್ಟಿನಲ್ಲಿ ಕ್ಯಾಂಪ್ಕೋ ಮಹಾಮಂಡಲ ಹಾಗೂ ಇತರ ಸಂಸ್ಥೆಗಳ ಜೊತೆಗೂಡಿ ರೋಗ ನಿಯಂತ್ರಣಕ್ಕೆ ಸಮಗ್ರ ಯೋಜನೆ ರೂಪಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸಂಘದ ಗೋಡೌನ್ ಆವರಣದಲ್ಲಿ ಗುರುವಾರ ಕ್ಯಾಂಪ್ಕೊ ಅಡಿಕೆ ಖರೀದಿ ಕೇಂದ್ರದ ನೂತನ ಗೋದಾಮು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಉಪಯುಕ್ತ ವಾಗುವಂತೆ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಸಂಸ್ಥೆ ಖರೀದಿ ಕೇಂದ್ರ ತೆರೆದಿದೆ ಎಂದರು.

ರೈತರ ಹಿತ ಕಾಯುವುದು ಸಂಸ್ಥೆಯ ಧ್ಯೇಯವಾಗಿದೆ ಅಡಿಕೆ ಬೆಳೆ ಉತ್ತಮವಾಗಿರಬೇಕು. ಹಾಗಾಗಿ ಸಂಸ್ಥೆಯ ಸದಸ್ಯತ್ವ ಪಡೆದ ರೈತರಿಗೆ ವರ್ಷದ ನಂತರ ಅವರು ನಡೆಸಿದ ವಹಿವಾಟಿಗೆ ಅನುಪಾತವಾಗಿ (ಸಬ್ಸಿಡಿ) ಅಡಿಕೆ ಗಿಡಗಳಿಗೆ ಬಳಕೆ ಮಾಡುವ ಮೈಲುತುತ್ತ ಸೇರಿದಂತೆ ಕ್ಯಾಂಪ್ಕೋ ಸಂಸ್ಥೆಯಿಂದ ಬಿಡುಗಡೆ ಮಾಡಿರುವ ನೈಸರ್ಗಿಕ ಸಾವಯವ ಉತ್ಪನ್ನಗಳು ಹಾಗೂ ಪರಿಕರಗಳು ರಿಯಾಯಿತಿ ದರದಲ್ಲಿ ದೊರಕಲಿವೆ ಹಾಗೂ ಆರೋಗ್ಯ, ಜೀವ ವಿಮೆ ಸೌಲಭ್ಯಗಳು ದೊರಕಲಿವೆ ಎಂದರು.

ಮಾರುಕಟ್ಟೆಯಲ್ಲಿ ತಾವು ಬೆಳೆದ ಬೆಳೆಗೆ ಉತ್ತಮ ಧಾರಣೆ ನೀಡುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೂ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಾವಯವ ಕೃಷಿ ಪದ್ಧತಿ ವರ್ತಮಾನದ ಅಗತ್ಯ : ಆರ್.ಎಂ.ಎಂ.

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹವಾಮಾನ ವೈಪರಿತ್ಯದಿಂದ ಕೃಷಿಕರ ಬದುಕು ದುಸ್ತರವಾಗಿದೆ. ಭೂತಾಯಿಯ ಒಡಿಲಿಗೆ ವಿಷ ಉಣಿಸುವ ಮೂಲಕ ತನ್ನ ಪ್ರಾಣಕ್ಕೆ ತಾನೇ ಕುತ್ತು ತಂದು ಕೊಳ್ಳುತ್ತಿರುವುದು ವರ್ತಮಾನದ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಪೂರ್ವಜರು ಶ್ರದ್ಧಾ ಭಕ್ತಿಯಿಂದ ಕುಟುಂಬ ನಿರ್ವಹಣೆಗಾಗಿ ಕಾಪಿಟ್ಟುಕೊಂಡು ಬಂದ
ಸಾವಯವ ಕೃಷಿ ಭೂಮಿಯನ್ನು
ಕೃಷಿಕರು ಅಧಿಕ ಇಳುವರಿ, ತ್ವರಿತ ಹಣಗಳಿಕೆಯ ಹಿಂದೆ ಬಿದ್ದು, ಅಗತ್ಯಕ್ಕಿಂತ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಿ, ನಾವು ತಿನ್ನುವ ಪ್ರತಿಯೊಂದು ಆಹಾರವು ಇಂದು ವಿಷಯುಕ್ತವಾಗಿ, ಭೂಮಿ ಬರುಡಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮನುಕುಲ ಅವಸಾನದತ್ತ ಸಾಗುವ ಮುನ್ನ ಎಚ್ಚೆತ್ತುಕೊಂಡು ಭವಿಷ್ಯದ ದಿನದಲ್ಲಿ ಮತ್ತೆ ಸಾವಯವ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳುವ ಚಿಂತನೆ ನಡೆಸಬೇಕಾಗಿದೆ ಎಂದರು.

ಸಹಕಾರಿ ಸಂಘದ ಅಧ್ಯಕ್ಷ ಎಂ.ಎಂ ಪರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳಿಗೆ ರೈತರೇ ಆಧಾರಸ್ತಂಭ. ಇಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರದಲ್ಲಿ ಸಹಕಾರ ಮನೋಭಾವದ ಪಾರದರ್ಶಕತೆ ಕಾಣಬಹುದು ಎಂದರು.

ಹೊಸ ಖರೀದಿ ಕೇಂದ್ರದಿಂದ ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಇದುವರೆಗೆ ಅಡಿಕೆಯನ್ನು ಮಾರಾಟ ಮಾಡಲು ದೂರದ ಪ್ರದೇಶಗಳಿಗೆ ತೆರಳಬೇಕಾಗಿದ್ದ ರೈತಾಪಿ ವರ್ಗದವರು ಈಗ ತಮ್ಮ ಪ್ರದೇಶದಲ್ಲೇ ಉತ್ತಮ ದರಕ್ಕೆ ಅಡಿಕೆ ಮಾರಾಟ ಮಾಡುವ ಅವಕಾಶ ಪಡೆಯುತ್ತಿದ್ದಾರೆ. ಜೊತೆಗೆ ಕ್ಯಾಂಪ್ಕೋ ಸದಸ್ಯರಾಗಿ ನಿರಂತರ ಅಡಿಕೆ ಹಾಕುವ ಮೂಲಕ ಆರೋಗ್ಯ ವಿಮೆ, ಜೀವ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಪಡೆಯುವ ಅವಕಾಶವೂ ಲಭ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಯಾಂಪ್ಕೋ ನಿರ್ದೇಶಕ ಹೆಚ್.ಎಂ ರಾಘವೇಂದ್ರ ಮಾತನಾಡಿ, “ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕಾರ ನೀಡಿದಾಗ ಮಾತ್ರ ರೈತರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಕಾಪಾಡಬಹುದು. ಈ ಖರೀದಿ ಕೇಂದ್ರವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ತಳಲೆ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಗೌಡ, ಅಮೃತ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಬಂಡಿ, ಅರಸಾಳು ಸಹಕಾರಿ ಸಂಘದ ಅಧ್ಯಕ್ಷ ಕೀರ್ತಿರಾಜ್ ಗೌಡ ಹಾಜರಿದ್ದರು.

Leave a Comment