ರಿಪ್ಪನ್‌ಪೇಟೆ ; ಆದಿ ಶಂಕರಾಚಾರ್ಯರು ಭಾರತೀಯ ಸಂಸ್ಕೃತಿಗೆ ನೀಡಿದ ಕೊಡುಗೆ ಅನನ್ಯ.ಅವರ ಅದ್ವೈತ ತತ್ವವು ಇಂದಿಗೂ ಮಾನವ ಜೀವನಕ್ಕೆ ದಾರಿ ದೀಪವಾಗಿದೆ. ಯುವಜನತೆಗೆ ಶಂಕರಾಚಾರ್ಯರ ಅದರ್ಶಗಳನ್ನು ಮನವರಿಕೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಕೋಣಂದೂರು ಕೆ.ಎಲ್.ರಾಘವೇಂದ್ರಭಟ್ಟ್ ಹೇಳಿದರು.
ಇಲ್ಲಿನ ಸಾಗರ ರಸ್ತೆಯಲ್ಲಿರುವ ಬ್ರಾಹ್ಮಣ ಸಂಘದ ಶ್ರೀರಾಮ ಸಮುದಾಯ ಭವನದಲ್ಲಿ ಆಯೋಜಿಸಲಾದ ಶ್ರೀಶಂಕರಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಅವರು, ಜಗದ್ಗುರು ಶಂಕರಾಚಾರ್ಯರು ಬಾಲ್ಯದಲ್ಲಿ ಗುರು ಗೋವಿಂದಭಗವತ್ಪಾದರಿಂದ ವೇದ ಉಪನಿಷತ್ ಮತ್ತು ಯೋಗ ವಿದ್ಯೆಯನ್ನು ಕರಗತ ಮಾಡಿಕೊಂಡು ಕಾಶಿಯಲ್ಲಿ ಶಿಷ್ಯರಿಗೆ ಉಪದೇಶ ನೀಡಿದ್ದರು. ಅವರು ರಚಿಸಿದ ಸ್ತೋತ್ರಗಳು ಅಷ್ಟಕಗಳು ಇಂದಿಗೂ ಪ್ರಸಿದ್ದವಾಗಿದೆ ಎಂದರು.
ಸಾಗರ ಕನ್ನಡ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕ ಮ.ಸ.ನಂಜುಂಡಸ್ವಾಮಿ ಮಾತನಾಡಿ ಧರ್ಮವೇ ನಿಜವಾದ ಅಯುಧ ಎಂದು ನಂಬಿದ ಶಂಕರಾಚಾರ್ಯರು. ದೇಶದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕಾ, ಪುರಿ ಮತ್ತು ಬದರಿಕಾಶ್ರಮದಲ್ಲಿ ಪೀಠಗಳನ್ನು ಆರಂಭಿಸಿ ತ್ಯಾಗಿ ಸನ್ಯಾಸಿ ಪರಂಪರೆಯನ್ನು ಆರಂಭಿಸಿದವರು. ಧರ್ಮವನ್ನು ಸದೃಡಗೊಳಿಸುವ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ರಾಹ್ಮಣ ಸಂಘದ ಅಧ್ಯಕ್ಷ ಹೆಚ್.ಪಿ.ಸುರೇಶ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿ ಕುಮಾರ್, ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಆರ್ ಭಟ್, ವಿಶ್ವಕರ್ಮ ಸಮಾಜದ ತಾಲ್ಲೂಕ್ ಗೌರವಾಧ್ಯಕ್ಷ ದೇವದಾಸ ಆಚಾರ್, ಭಾಗವಹಿಸಿ ಮಾತನಾಡಿದರು.
ಅಮಿತಾ ಬಲ್ಲಾಳ್ ಸ್ವಾಗತಿಸಿದರು. ಪದ್ಮಾ ಸುರೇಶ್ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ರಾಧಾಕೃಷ್ಣ ವಂದಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





