ಹೊಸನಗರ ; ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಮ್ ರಾವ್ ತಿಳಿಸಿದರು.
ಅವರು ತಾವು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬರವಣಿಗೆ ಹವ್ಯಾಸವೇ ಕಡಿಮೆಯಾಗುತ್ತಿದೆ. ವಿದ್ಯಾಭ್ಯಾಸ ಬಳಿಕ ಹವ್ಯಾಸಕ್ಕಾಗಿ ಬರೆಯುವವರು ವಿರಳ ಎನ್ನುವಂತಾಗಿದೆ. ಭಾಷಾ ಜ್ಞಾನ ಹೊಂದುವ ಜೊತೆ ಬರವಣಿಗೆ ಸೃಜನಾತ್ಮಕ ಬೆಳವಣಿಗೆಗೆ ಕಾರಣವಾಗುತ್ತಿದೆ. ಸೂಕ್ತ ಪದಬಳಕೆ, ವ್ಯಾಕರಣ ಶುದ್ಧ ವಾಕ್ಯಗಳನ್ನು ರಚಿಸುವಲ್ಲಿ ವಿದ್ಯಾರ್ಥಿಗಳು ತಪ್ಪುಗಳನ್ನು ಮಾಡುತ್ತಿದ್ದಾರೆ. ತಂತ್ರಜ್ಞಾನದ ವಿಪರೀತ ಅವಲಂಬನೆ ಸಹಾ ಕನ್ನಡ ಭಾಷೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮಸ್ಥರಾದ ಸಂತೋಷ್, ಶಶಿಭೂಷಣ್, ತೀರ್ಥೇಶ್ ಮತ್ತಿತರರು ಇದ್ದರು.
ನಮ್ಮ ಹೆಮ್ಮೆಯ ಶಿವಮೊಗ್ಗ ಜಿಲ್ಲೆ ಪ್ರವಾಸಿ ತಾಣ ಉಳಿವಿಗಾಗಿ ನಮ್ಮ ಪಾತ್ರ ವಿಷಯ ಕುರಿತು ನಡೆದಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗುಬ್ಬಿಗ ಗ್ರಾಮದ ಪದವಿ ವಿದ್ಯಾರ್ಥಿನಿ ಜಿ.ಪಿ.ಅನನ್ಯ ಹಾಗೂ ಅಲಗೇರಿಮಂಡ್ರಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಜೆ.ಆಯುಶ್ರೀ, ಸಾಗರದ ದುಗ್ಗಿನಕೊಡ್ಡು ಗ್ರಾಮದ ವಿದ್ಯಾರ್ಥಿನಿ ಡಿ.ವಿ. ಭಾವನ ತೃತೀಯ ಬಹುಮಾನ ಪಡೆದಿದ್ದಾರೆ. ಒಟ್ಟು 26 ಮಂದಿ ಭಾಗವಹಿಸಿದ್ದರು.

