ರಿಪ್ಪನ್‌ಪೇಟೆ ; ಕೇಂದ್ರ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆಮನೆಗೆ ಶುದ್ದ ಗಂಗೆ ಯೋಜನೆಯ ಕಾಮಗಾರಿ ಆರಂಭಗೊಂಡು ವರ್ಷಗಳೇ ಉರುಳಿದರೂ ಕೂಡಾ ಕಾಮಗಾರಿ ಕಳಪೆ ಗುಣಪಟ್ಟದಲ್ಲಿ ಕೂಡಿದ್ದು ಅಲ್ಲದೆ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ ಸಂಪರ್ಕದ ರಸ್ತೆ ತಿರುವಿನಲ್ಲಿ ಜೆಜೆಎಂ ಕಾಮಗಾರಿ ಸಂದರ್ಭದಲ್ಲಿ ಮೋರಿಯನ್ನು ಕಿತ್ತು ಹಾಕಿ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದ್ದು ನರ ಬಲಿಗಾಗಿ ಕಾದುಕೂತಂತಾಗಿದೆ ಎಂದು ಜಂಬಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಹುಂಚ ಹೋಬಳಿ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಜಂಬಳ್ಳಿ ಗ್ರಾಮದ ಕೋಟೆತಾರಿಗ – ಜಂಬಳ್ಳಿ ಸಂಪರ್ಕದ ಜಂಬಳ್ಳಿಯ ಲಿಂಕ್ ರಸ್ತೆಯ ತಿರುವಿನಲ್ಲಿ ಇತ್ತೀಚೆಗೆ ಕಾಂಕ್ರೀಟ್ ರೋಡ್ ನಿರ್ಮಿಸುವ ಮೂಲಕ ಮೋರಿಗೆ ಕಾಂಕ್ರೀಟ್ ಸ್ಲಾಬ್ ಮಾಡಿ ಅಕ್ಕಪಕ್ಕ ಏನು ಅವಘಡಗಳು ಸಂಭವಿಸದಂತೆ ಮೋರಿ ಕಟ್ಟೆಯನ್ನು ನಿರ್ಮಿಸಲಾಗಿದ್ದರೂ ಕೂಡಾ ಅದನ್ನು ಕೆಡವಿ ಮೋರಿಯ ಬಳಿ ಜೆಜೆಎಂ ಪೈಪ್ ಲೈನ್ ಅಳವಡಿಸಿದ್ದಾರೆ.
ಈ ಬಗ್ಗೆ ಗುತ್ತಿಗೆದಾರನಿಗೂ ಮತ್ತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಿಡಿಒರಿಗೂ, ತಾಲ್ಲೂಕು ಪಂಚಾಯಿತ್ ಇಓ ಗಮನಕ್ಕೆ ತಂದರು ಏನು ಪ್ರಯೋಜನವಾಗಿಲ್ಲ ಎಂದು ಜಂಬಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಮುಂದಾಗುವರೆ ಕಾದು ನೋಡಬೇಕಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





