ಬಿದರಹಳ್ಳಿಯಲ್ಲಿ 824 ವರ್ಷದ ಅಪ್ರಕಟಿತ ವೀರಗಲ್ಲು ಪತ್ತೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಬಿದರಹಳ್ಳಿ ಗ್ರಾಮದಲ್ಲಿ ಕ್ರಿ.ಶ. 1202ರ ಕಾಲಘಟ್ಟದ ಅಪ್ರಕಟಿತ ವೀರಗಲ್ಲು ಪತ್ತೆಯಾಗಿದ್ದು, ಇದು ಇತಿಹಾಸಾಸಕ್ತರು ಮತ್ತು ಶಾಸನ ಸಂಶೋಧಕರ ಗಮನ ಸೆಳೆದಿದೆ. ಗ್ರಾಮದ ಸುತ್ತಮುತ್ತ ನಡೆದ ಪರಿಶೋಧನೆಯ ವೇಳೆ ಐದು ಮಾಸ್ತಿಕಲ್ಲುಗಳು ಮತ್ತು ಒಂದು ಅಪರೂಪದ ವೀರಗಲ್ಲು ಕಂಡುಬಂದಿದ್ದು, ಈ ವೀರಗಲ್ಲು ಹೊಸಗುಂದದ ಬೀರರಸನ ಕಾಲಕ್ಕೆ ಸೇರಿದ್ದು ಎಂದು ತಿಳಿದುಬಂದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಾಸನ ತಜ್ಞ ರಮೇಶ್ ಹಿರೇಜಂಬೂರು ಮಾಹಿತಿ ನೀಡಿರುವಂತೆ, ಈ ವೀರಗಲ್ಲಿನ ಮೇಲೆ ಹತ್ತು ಸಾಲುಗಳ ಶಾಸನವನ್ನು ಕಾಣಬಹುದು. ಶಾಸನದಲ್ಲಿ ಬೀರರಸನನ್ನು ‘ಸತ್ಯರತ್ನಾಕರ’, ‘ಸರಣಾಗತ ವಜ್ರಪಂಜರ’, ‘ಪರಿನಾರಿ ಸಹೋದರ’ ಎಂಬ ಬಿರುದುಗಳಿಂದ ಗೌರವಿಸಲಾಗಿದೆ. ಇದು ಆ ಕಾಲದ ರಾಜಕೀಯ ಪ್ರಭಾವ ಮತ್ತು ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯ ಕುರಿತು ಮಹತ್ವದ ಮಾಹಿತಿ ನೀಡುತ್ತದೆ.

ಶಾಸನದಲ್ಲಿ ಬೀರರಸನ ಸೈನ್ಯ ಸಾಗುತ್ತಿದ್ದ ಸಂದರ್ಭ ಸಾತಗೌಡನ ಮಗ ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ ಎಂದು ಹೇಳಲಾಗಿದೆ. ಆ ವೀರನ ಸ್ಮರಣಾರ್ಥ ಲಕ್ಷ್ಮಿ ತಾಯಿ ಬಿಲ್ಲಬ್ಬೆಗೌಡತಿ ಮತ್ತು ಅಣ್ಣಬ್ಬೆಗೌಡತಿ ಎಂಬ ಮಹಿಳೆಯರು ಪರೋಕ್ಷ ವಿನಯಾರ್ಥವಾಗಿ ಈ ವೀರಗಲ್ಲನ್ನು ಸ್ಥಾಪಿಸಿದ್ದರು. ವೀರನ ಸ್ಮರಣಾರ್ಥ ವೀರಗಲ್ಲಿಗೆ ಪೂಜೆ ಸಲ್ಲಿಸುವುದಾಗಿ ಶಾಸನದಲ್ಲಿ ಉಲ್ಲೇಖವಿದೆ. ಜೊತೆಗೆ ‘ಸಾವಿರ ಖಂಡುಗ’ ಎಂಬ ದಾನದ ಉಲ್ಲೇಖವು ಆ ಕಾಲದ ದಾನಧರ್ಮ ಮತ್ತು ಆಚರಣೆಗಳ ಕುರಿತು ಹೆಚ್ಚಿನ ಬೆಳಕು ಚೆಲ್ಲುತ್ತದೆ.

ವೀರಗಲ್ಲಿನ ವಿಶೇಷತೆಯೆಂದರೆ “ಗೂಳಿ-ಹಸು ಮದುವೆ” ಎಂಬ ಅಪರೂಪದ ಸಾಂಸ್ಕೃತಿಕ ಆಚಾರದ ಉಲ್ಲೇಖ. ಯುದ್ಧದಲ್ಲಿ ಮರಣ ಹೊಂದಿದ ವೀರನು ಅವಿವಾಹಿತನಾಗಿದ್ದರೆ, ಅವನ ಆತ್ಮಶಾಂತಿಗಾಗಿ ಗೂಳಿ ಮತ್ತು ಹಸುವಿನ ಮದುವೆ ನಡೆಸುವ ಸಂಪ್ರದಾಯ ಇದ್ದದ್ದಾಗಿ ಶಾಸನ ತಿಳಿಸುತ್ತದೆ. ಈ ರೀತಿಯ ಆಚರಣೆಗಳು ಆ ಕಾಲದ ನಂಬಿಕೆ, ಸಂಸ್ಕೃತಿ ಮತ್ತು ಮರಣೋತ್ತರ ವಿಧಿಗಳ ಕುರಿತು ಅಮೂಲ್ಯ ಮಾಹಿತಿ ನೀಡುತ್ತವೆ.

ಬಿದರಹಳ್ಳಿಯಲ್ಲಿ ಪತ್ತೆಯಾದ ಈ ವೀರಗಲ್ಲು ಕೇವಲ ಕಲ್ಲಿನ ಶಾಸನವಲ್ಲ, ಮಧ್ಯಯುಗೀನ ಕನ್ನಡ ನಾಡಿನ ಯುದ್ಧಸಾಹಸ, ಸಾಂಸ್ಕೃತಿಕ ನಂಬಿಕೆಗಳು ಮತ್ತು ದಾನಧರ್ಮದ ಪರಂಪರೆಯನ್ನು ಮೌನವಾಗಿ ಪ್ರತಿಬಿಂಬಿಸುವ ಐತಿಹಾಸಿಕ ಸಾಕ್ಷಿಯಾಗಿದೆ. ಇಂತಹ ಪುರಾತನ ಸ್ಮಾರಕಗಳ ಸಂರಕ್ಷಣೆ ಮತ್ತು ವೈಜ್ಞಾನಿಕ ಅಧ್ಯಯನ ಅತ್ಯಗತ್ಯವೆಂದು ಇತಿಹಾಸಾಸಕ್ತರು ಅಭಿಪ್ರಾಯಪಟ್ಟಿದ್ದಾರೆ.

ಈ ಅಪರೂಪದ ವೀರಗಲ್ಲಿನ ಅಧ್ಯಯನವನ್ನು ಶಾಸನ ತಜ್ಞ ರಮೇಶ್ ಹಿರೇಜಂಬೂರು ಮಾರ್ಗದರ್ಶನದಲ್ಲಿ ಆದಿತ್ಯ ನಂಜವಳ್ಳಿ ಹಾಗೂ ಗಣೇಶ್ ಕೆ.ಎನ್. ಕೋಣಂದೂರು ನಡೆಸಿದ್ದಾರೆ. ಪರಿಶೋಧನಾ ತಂಡದಲ್ಲಿ ಗ್ರಾಮಸ್ಥರಾದ ಲಕ್ಷ್ಮಣ, ಲಿಂಗರಾಜು, ರಾಜೇಶ್, ರವಿ, ರಾಘವೇಂದ್ರ, ಮೋಹನ್ ಕುಮಾರ್, ಜೀವನ್, ಮಹೇಶ್, ಸೋಮಶೇಖರ್, ರೇಣುಕಪ್ಪ ಮತ್ತಿತರರು ಇದ್ದರು.

“ಈ ಶಾಸನದಲ್ಲಿ ಕಂಡುಬಂದ ಗೂಳಿ-ಹಸು ಮದುವೆಯ ಉಲ್ಲೇಖವು ಆ ಕಾಲದ ಜನರ ನಂಬಿಕೆ, ಸಾಮಾಜಿಕ ಮೌಲ್ಯ ಮತ್ತು ಸಾಂಸ್ಕೃತಿಕ ಜೀವನದ ಬಗ್ಗೆ ವಿವರಿಸುತ್ತದೆ.”
– ಆದಿತ್ಯ ನಂಜವಳ್ಳಿ, ಶಾಸನ ಸಂಶೋಧಕ

“ಬೀರರಸನ ಕಾಲದ ಈ ಶಾಸನವು ಯುದ್ಧ ಮತ್ತು ವೀರಬಲಿದಾನದ ವಿವರಗಳನ್ನು ಒಳಗೊಂಡಿದ್ದು, ಅವಿವಾಹಿತ ವೀರನ ಸ್ಮರಣಾರ್ಥ ಗೂಳಿ-ಹಸುವಿನ ಮದುವೆ ಹಾಗೂ ಸಾವಿರ ಖಂಡುಗ ದಾನ ನೀಡಿದ ವಿಷಯ ವಿಶೇಷವಾಗಿದೆ”.
– ಗಣೇಶ್ ಕೋಣಂದೂರು, ಶಾಸನ ಸಂಶೋಧಕ

Leave a Comment