ಶಿವಮೊಗ್ಗ : ರಾಜ್ಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಕಾಂಗ್ರೆಸ್ ಪಕ್ಷದ ದೆಹಲಿಯಲ್ಲಿ ನಡೆದ 5 ಗಂಟೆಗಳ ಸಭೆಯ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬುಧವಾರ ಪ್ರಮುಖ ಹೇಳಿಕೆ ನೀಡಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲೂ ಕಾಂಗ್ರೆಸ್ ಪಕ್ಷವು ಕುಸಿತದ ಹಾದಿಯಲ್ಲಿದ್ದು, ದೇಶದಲ್ಲಿ ಪಕ್ಷದ ಕೊನೆ ದಿನಗಳು ಪ್ರಾರಂಭವಾಗಿವೆ ಎಂದು ತಿಳಿಸಿದ್ದಾರೆ.
ಸಿಎಂ ಯಾರು ಆಗುತ್ತಾರೆ ಎಂಬುದು ಮುಖ್ಯ ವಿಷಯವಲ್ಲ ಎಂದ ಅವರು, ದಕ್ಷಿಣ ಭಾರತದ ಇತರ ರಾಜ್ಯಗಳೊಂದಿಗೆ ಹೋಲಿಸಿದರೆ, ಸಿದ್ದರಾಮಯ್ಯ ಸರ್ಕಾರವು ರಾಜ್ಯದ ಮೇಲೆ ಸುಮಾರು 10 ಲಕ್ಷ ಕೋಟಿ ರೂಪಾಯಿ ಸಾಲ ಬಾಧ್ಯತೆ ಹೇರಿಕೊಂಡಿರುವುದು ಗಂಭೀರ ವಿಷಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಬಗ್ಗೆ ನನಗೆ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಕಲಹ ಮತ್ತು ಸಂಘರ್ಷದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತಕ್ಕೆ ಒಳಗಾಗಿರುವುದನ್ನು ತೀವ್ರವಾಗಿ ಟೀಕಿಸಿದರು. ಈ ಸರಕಾರವು ಜನರ ವಿರೋಧಿಯಾಗಿದೆ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಯಾವುದೇ ಹೊಸ ಸಿಎಂ ಅಧಿಕಾರಕ್ಕೆ ಬಂದರೂ ಅದು ತಾತ್ಕಾಲಿಕವಾಗಿದ್ದು, ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

