Shivamogga

ಕೋಡೂರಿನ ಬಾಣಂತಿ ಸಾವು ಪ್ರಕರಣ ; ಉನ್ನತ ಮಟ್ಟದ ತನಿಖೆಗೆ ಯು.ಟಿ.ಖಾದರ್ ಸೂಚನೆ

ಶಿವಮೊಗ್ಗ : ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಸಾಧಾರಣ ಸೇವಾ ಸೌಲಭ್ಯಗಳು ಲಭ್ಯವಿದ್ದಾಗಲೂ ಬಾಣಂತಿ ಅಥವಾ ಮಗುವಿನ ಸಾವು ಯಾವುದೇ ಸರ್ಕಾರಕ್ಕೆ ಸಮಾಧಾನದ ಸಂಗತಿಯಲ್ಲ. ಕೋಡೂರು ಬಳಿಯ ಶಾಖವಳ್ಳಿ ಗ್ರಾಮದ ಬಾಣಂತಿ ಸುಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮಟ್ಟದ ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ತಜ್ಞರಿಂದಲೂ ಈ ವಿಷಯದ ಕುರಿತು ತನಿಖೆ ನಡೆಸಿ, ವರದಿ ಪಡೆದು ಅಗತ್ಯ ಕ್ರಮ ವಹಿಸಲಾಘುವುದು. ಅಲ್ಲದೆ ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ತಂತ್ರಜ್ಞರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೆಗ್ಗಾನ್‌ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನೊಳಗೊಂಡ High Risk Team ಇದ್ದಾಗ್ಯೂ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಬೇರೆಡೆಗೆ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡುವ ವೈದ್ಯರ ಕ್ರಮ ಸರಿಯಲ್ಲ. ಎಲ್ಲಾ ವ್ಯವಸ್ಥೆಗಳಿರುವ ವೈದ್ಯಕೀಯ ಮಹಾವಿದ್ಯಾಲಯವೇ ಇಲ್ಲಿರುವಾಗ ರೋಗಿಗಳು ಬೇರೆಡೆಗೆ ಹೋಗುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದ ಅವರು, ತೀವ್ರ ಹಾಗೂ ಗಂಭೀರ ಸ್ವರೂಪದ ಕಾಯಿಲೆ ಅಥವಾ ಅಪಘಾತಗಳ ಸಂದರ್ಭದಲ್ಲಿ ವೈದ್ಯರು ಜನಸೇವೆಗೆ ಸದಾ ಸಿದ್ಧರಾಗಿರಬೇಕು ಎಂದರು.

ಹಲವು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ಕಂಟಕಪ್ರಾಯವಾಗಿರುವ ಮಂಗನಕಾಯಿಲೆ ನಿಯಂತ್ರಣದ ಕುರಿತು ಶೀಘ್ರದಲ್ಲಿ ಬೆಂಗಳೂರಿನಲ್ಲಿ ತಜ್ಞರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಈವರೆಗೆ ಗುರುತಿಸಲಾಗಿರುವ 130 ಪ್ರಕರಣಗಳಲ್ಲಿ 05 ಜನರು ಮೃತರಾಗಿರುವುದು ಅತ್ಯಂತ ನೋವಿನ ಸಂಗತಿ. ಸಕಾಲದಲ್ಲಿ ಕಾಯಿಲೆಗೆ ಚಿಕಿತ್ಸೆ ದೊರೆಯುವಂತೆ ವೈದ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಜಿಲ್ಲೆಯಲ್ಲಿ ಡೇಂಗ್ಯೂ, ಚಿಕೂನ್‌ಗುನ್ಯಾ, ಮಲೇರಿಯಾ ಮುಂತಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯವಾಗಿರುವ ಔಷಧಗಳ ದಾಸ್ತಾನು ಇದೆ. ಈ ಕಾಯಿಲೆಗಳ ನಿಯಂತ್ರಣ ಕ್ರಮವಾಗಿ ವೈದ್ಯಕೀಯ ಸಿಬ್ಬಂಧಿಗಳು ಜನರಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸುವುದು ಸೊಳ್ಳೆಗಳ ನಿಯಂತ್ರಣ ಕ್ರಮದ ಮೊದಲ ಹೆಜ್ಜೆಯಾಗಿದೆ. ಅಗತ್ಯವಿರುವೆಡೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಯಂತ್ರಗಳನ್ನು ಬಳಸಬೇಕು. ಸ್ಥಳೀಯ ಸಂಸ್ಥೆಗಳು ಅಂಗಡಿ ಮುಂಗಟ್ಟುಗಳ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ವಚ್ಚತೆಯ ಕುರಿತು ನಿಬಂಧನೆಗಳನ್ನು ವಿಧಿಸಬೇಕು. ತಪ್ಪಿದಲ್ಲಿ ನಿರ್ದಾಕ್ಷಿಣ್ಯವಾಗಿ ಪರವಾನಿಗೆ ರದ್ದುಗೊಳಿಸಬೇಕು ಎಂದರು.

ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಬಡತನ ರೇಖೆಯ ಕೆಳಗಿನ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಚಿಕಿತ್ಸೆಗೆ ದಾಖಲಾದ ವ್ಯಕ್ತಿಯಿಂದ ಚಿಕಿತ್ಸೆ ನೀಡಿದ ಬಗ್ಗೆ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅಂತಹ ಘಟನೆಗಳು ಮರುಕಳಿಸಿ ದೂರುಗಳು ದಾಖಲಾದಲ್ಲಿ ಅಂತಹ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಆಯುಷ್ಮಾನ್‌ ಯೋಜನೆಯ ನೋಂದಣಿ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ, ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬಂದಿದೆ. ಇಂತಹ ವಿಷಯಗಳಲ್ಲಿ ದೂರುಗಳು ದಾಖಲಾದಲ್ಲಿ ʼಆರೋಗ್ಯಮಿತ್ರʼ ಸಿಬ್ಬಂದಿ ಮತ್ತು ಸಂಬಂಧಿಸಿದ ಕಾರ್ಯಕ್ರಮ ಸಂಯೋಜಕರ ವಿರುದ್ದ ಕ್ರಮ ಅನಿವಾರ್ಯವಾಗಲಿದೆ ಎಂದ ಅವರು ಆರೋಗ್ಯ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಸಿಬ್ಬಂಧಿಗಳು ತಮ್ಮ ಜವಾಭ್ದಾರಿಯರಿತು ಪ್ರಾಮಾಣಿಕವಾಗಿ ಸಾರ್ವಜನಿಕ ಸೇವೆ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಹ ವೈದ್ಯರನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ ಸೇವೆಗೆ ಮುಂದಾಗಿ ಅರ್ಜಿ ಸಲ್ಲಿಸುವ ಅರ್ಹ ವೈದ್ಯರ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ಮೂರು ದಿನಗಳೊಳಗಾಗಿ ನೇಮಕಾತಿ ಆದೇಶ ನೀಡಲಾಗುವುದು. ಮಲೆನಾಡು, ಗುಡ್ಡಗಾಡು, ಗಡಿ, ಕಾಡಿನ ಮದ್ಯದ ಪ್ರದೇಶಗಳು ಸೇರಿದಂತೆ ನಗರದಿಂದ ದೂರದ ಪ್ರದೇಶದಲ್ಲಿದ್ದು, ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂಧಿಗಳಿಗೆ ವಿಶೇಷ ವೇತನ ಭತ್ಯೆಗಳನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಡಾಕ್ಟರ್‌, ಎ.ಎನ್.ಎಂ., ಫಾರ್ಮಸಿಸ್ಟ್‌, ನರ್ಸ್‌, ಲ್ಯಾಬ್‌ ಟೆಕ್ನೀಷಿಯನ್ಸ್, ಡಿ.ಗ್ರೂಫ್‌ ನೌಕರರ ನೇಮಕಾತಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಶೀಘ್ರದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದ ಅವರು, ಶಿವಮೊಗ್ಗದಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಎಲ್ಲಿ ನಿರ್ಮಿಸಬೇಕು ಎಂಬ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಪ್ರಸ್ತುತ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ವಿಷಯ ಸರ್ಕಾರದ ಮುಂದಿಲ್ಲ ಎಂದವರು ನುಡಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಈ ಹಿಂದೆ ಬಳಸುತ್ತಿದ್ದ ತೈಲವನ್ನು ಹಲವು ಕಾರಣಗಳಿಂದಾಗಿ ಹಿಂಪಡೆಯಲಾಗಿದೆ. ಅಲ್ಲದೇ ಕಾಯಿಲೆಯ ನಿಯಂತ್ರಣಕ್ಕೆ ಔಷಧ ಸಂಶೋಧಿಸಲು ಈಗ್ಗೆ ಐದು ವರ್ಷಗಳ ಹಿಂದೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಅಲ್ಲದೇ ಇತ್ತೀಚೆಗೆ ಕೇಂದ್ರ ವೈದ್ಯಕೀಯ ಸಚಿವರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಮಾತ್ರೆಗಳ ಕೊರತೆ ಇದ್ದ ಬಗ್ಗೆ ಅಧೀಕೃತವಾಗಿ ಮಾಹಿತಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ ಎಸ್.ಎನ್., ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಅಲೆಮಾರಿ ಅಭಿವೃದ್ಧಿ ನಿಗಮದ ಅ‍ಧ್ಯಕ್ಷೆ ಶ್ರೀಮತಿ ಪಲ್ಲವಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>