ಬೇಸೂರು ಅಣು ವಿದ್ಯುತ್ ಸ್ಥಾವರವೂ ಇಲ್ಲ, ವಿದ್ಯುತ್ ಖಾಸಗೀಕರಣವೂ ಇಲ್ಲ ; ಬೇಳೂರು ಗೋಪಾಲಕೃಷ್ಣ

Written by Mahesha Hindlemane

Published on:

ಶಿವಮೊಗ್ಗ ; ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದ ಯಾವುದೇ ಯೋಜನೆ ಇಲ್ಲ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಯೋಚನೆಯು ರಾಜ್ಯ ಸರ್ಕಾರದ ಒತ್ತಾಯದಿಂದ ರದ್ದುಪಡಿಸಲಾಗಿದೆ ಮತ್ತು ರೈತರು ಯಾವುದೇ ಆತಂಕ ಹೊಂದಬೇಕಿಲ್ಲ ಎಂದು ತಿಳಿಸಿದರು.

“ಈ ಯೋಜನೆ ಕೇಂದ್ರ ಸರ್ಕಾರದ ಇಚ್ಛೆಯಾದರೂ, ರಾಜ್ಯ ಸರ್ಕಾರದ ಸಹಕಾರವಿಲ್ಲದೆ ಸಾಧ್ಯವಿಲ್ಲ. ನಾವು ಈ ಬಗ್ಗೆ ಹೋರಾಟ ನಡೆಸಿ, ರೈತರ ಹಿತಕ್ಕಾಗಿ ಹಸ್ತಕ್ಷೇಪ ಮಾಡಿದ್ದೇವೆ. ಹೀಗಾಗಿ ಬೇಸೂರು ಪ್ರದೇಶದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯ ಪ್ರಶ್ನೆಯೇ ಇಲ್ಲ. ಇದಲ್ಲದೆ, ರಾಜ್ಯದ ಇತರೆ ಭಾಗಗಳಲ್ಲಿಯೂ ಅಣು ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಭರವಸೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ನೀಡಿದ್ದರು,” ಎಂದು ಅವರು ವಿವರಿಸಿದರು.

ವಿದ್ಯುತ್ ಖಾಸಗೀಕರಣ ಇಲ್ಲ !

ವಿದ್ಯುತ್ ಖಾಸಗೀಕರಣದ ಕುರಿತು ಮಾತನಾಡಿದ ಅವರು, ಈ ವಿಚಾರವು ಕೇಂದ್ರ ಸರ್ಕಾರದ ಒತ್ತಡದ ಪರಿಣಾಮವಾಗಿ ಆಗಿದೆ ಎಂದು ಅಭಿಪ್ರಾಯಪಟ್ಟರು. “ಅದಾನಿ, ಅಂಬಾನಿ ಅವರಿಗೆ ಲಾಭ ನೀಡುವ ಉದ್ದೇಶದಿಂದ ಈ ಯೋಜನೆಗಳು ಮುಂದುವರಿಯುತ್ತಿದ್ದವು, ಆದರೆ ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಒಪ್ಪುವುದಿಲ್ಲ. ರೈತರಿಗೆ ಉಚಿತ ವಿದ್ಯುತ್ ಸೇವೆ ಮುಂದುವರಿಯಲಿದೆ. ಯಾವುದೇ ಖಾಸಗೀಕರಣ ಅಥವಾ ಅಣು ಸ್ಥಾವರ ಸ್ಥಾಪನೆ ಎಂಬುದು ಕೇವಲ ಕಲ್ಪನೆ ಮಾತ್ರ,” ಎಂದು ಅವರು ಹೇಳಿದರು.

ಪಂಪ್ಡ್ ಸ್ಟೋರೇಜ್ ಯೋಜನೆ ಮುಂದುವರಿಕೆ :

ಈಗ ಹೊಸದಾಗಿ ಜಲಾಶಯ ಕಟ್ಟಲು ಆಗುವುದಿಲ್ಲ. ಆದರೆ ಪ್ರಸ್ತುತ ಲಭ್ಯವಿರುವ ನೀರಿನಲ್ಲೇ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುವುದರಿಂದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮುಂದುವರೆಯಲಿದೆ ಎಂದು ಹೇಳಿದರು‌.

ಪರಿಸರ ಹಾನಿ ತಪ್ಪಿಸಲು ಸಂರಕ್ಷಣೆಗೆ ಪರ್ಯಾಯ ಜಾಗ ನೀಡುತ್ತೇವೆ, ಹಾಗಾಗಿ ಈ ಯೋಜನೆ ಸಿದ್ದಪಡಿಸುತ್ತಿದ್ದೇವೆ, ಕಾನೂನು ರೀತಿಯಲ್ಲಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಬಿಜೆಪಿ ಭಯಗೊಂಡಿದೆ :

ಎಸ್‌ಐಆರ್ (Special Identification Registry) ಸಂಬಂಧಿಸಿದಂತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಇದರಿಂದ ಬಿಜೆಪಿ ಪಕ್ಷ ಭಯಗೊಂಡಿದೆ ಎಂದು ಅಭಿಪ್ರಾಯಪಟ್ಟರು. “ಕರ್ನಾಟಕವು ಕಲ್ಕತ್ತಾ ಅಲ್ಲ, ಇಲ್ಲಿ ಯಾವುದೇ ಅಕ್ರಮ ನಡೆಯುವುದಿಲ್ಲ. ಅಧಿಕಾರಿಗಳು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶದ ನಾಗರಿಕರಿಗೆ ಮತದಾನ ಹಕ್ಕು ನೀಡಬಾರದು. ಎಲ್ಲಾ ಧರ್ಮಗಳ ಭಾರತೀಯರು ದಾಖಲೆ ಸಲ್ಲಿಸಿದರೆ ಮತದಾನ ಹಕ್ಕು ಸಿಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.

ಸಿಎಂ ಭರವಸೆ :

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಕುರಿತ ಹೋರಾಟದಲ್ಲಿಯೂ ಅವರು ತಮ್ಮ ಪಾಲನ್ನು ಪೂರೈಸಿದ್ದಾರೆ. “ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠ ಬದಲಾಗಿ, ಎಲ್ಲಾ ಸೌಲಭ್ಯಗಳಿರುವ ಶಿವಮೊಗ್ಗದಲ್ಲಿ ಇಡಬೇಕು ಎಂದು ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳಿಂದ ಪರಿಶೀಲನೆಯ ಭರವಸೆ ದೊರೆತಿದೆ,” ಎಂದು ಹೇಳಿದರು.

ವಿಮಾನ ಹಾರಾಟಕ್ಕೆ ಅಡ್ಡಿಯಿಲ್ಲ !

ವಿಮಾನ ಸಂಚಾರದ ವಿಚಾರದಲ್ಲಿ ಅವರು, “ರಾಜ್ಯ ಸರ್ಕಾರದಿಂದ ವಿಮಾನ ಹಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೂ ಕ್ರಮಗಳನ್ನು ಕೈಗೊಂಡಿದ್ದೇವೆ. ಕೇಂದ್ರದ ಉಡಾನ್ ಯೋಜನೆಯ ಜಾರಿಗೆ ನಂತರ ಶಿವಮೊಗ್ಗ ವಿಮಾನ ಸಂಚಾರ ಆರಂಭವಾಗಲಿದೆ,” ಎಂದರು.

ಅಡಿಕೆ ಲಾರಿ ನಿಲ್ಲಿಸುವವರು ಬಿಜೆಪಿಯವರು !

ಅಡಿಕೆ ವ್ಯವಹಾರ ಕುರಿತು ಮಾತನಾಡಿ, ಅವರು, “ಬಿಜೆಪಿ ಪಕ್ಷದವರು ಅಡಿಕೆ ಸಂಬಂಧದಲ್ಲಿ ಮೊಸಳೆ ಕಣ್ಣೀರು ಸುರುಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜ್ಯದ ಅಡಿಕೆ ಲಾರಿಗಳನ್ನು ನಿಲ್ಲಿಸುವವರು ಕೂಡ ಇವರೇ. ಅವರು ನಾಟಕ ಮಾಡುತ್ತಿದ್ದಾರೆ,” ಎಂದು ಟೀಕಿಸಿದರು.

ನಾನು ಆಕಾಂಕ್ಷಿ :

ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಮಾತನಾಡಿ, “ನಾನು ಸಹ ಸಚಿವ ಸ್ಥಾನಕ್ಕೆ ಆಕಾಂಕ್ಷಿ. ಎಲ್ಲರೂ ಹಾಗೆಯೇ ಹಂಬಲಿಸುತ್ತಾರೆ. ನಾನು ದೆಹಲಿಗೆ ಭೇಟಿ ನೀಡಿದ್ದು, ಇದರಲ್ಲಿ ಲಾಭಿಯ ಪ್ರಶ್ನೆ ಇಲ್ಲ. ಮುಂದಿನ ಕ್ರಮವನ್ನು ನೋಡೋಣ,” ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಕೆ.ಎಸ್. ಈಶ್ವರಪ್ಪ ಭವಿಷ್ಯ ಖತಂ :

ಈ ಈಶ್ವರಪ್ಪ ಎಂಬ ವ್ಯಕ್ತಿ ಮತ್ತೇ ಕೂಗುಮಾರಿಯಾಗಿದ್ದಾರೆ. ಮಾತೆತ್ತಿದ್ದರೆ ಮುಸ್ಲಿಂರನ್ನು ಬಯ್ಯುವುದು, ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೆ ಇವರ ಕೆಲಸವಾಗಿದೆ. ಈಶ್ವರಪ್ಪ ಏನೇ ಮಾಡಿದರು ಅವರನ್ನು ಬಿಜೆಪಿಗಂತು ಸೇರಿಸಿಕೊಳ್ಳುವುದಿಲ್ಲ. ಅವರ ಭವಿಷ್ಯ ಈಗಾಗಲೇ ಖತಂ ಆಗಿದೆ ಎಂದು ಹೇಳಿದರು.

ಹಿಂದೂ ಹೆಸರೇಳಿ ಜೀವಿಸುವ ಈಶ್ವರಪ್ಪ, ಯತ್ನಾಳ್, ಅನಂತ್‌ಕುಮಾರ್ ನಂತವರನ್ನು ಈಗಾಗಲೇ ಬಿಜೆಪಿ ಪಕ್ಷದಿಂದಲೇ ಹೊರ ಹಾಕಿದೆ. ಏನಾದರೂ ಮಾಡಿ ಬಿಜೆಪಿಗೆ ಸೇರಬೇಕೆಂದು ಇವರು ಶಿವಮೊಗ್ಗದಿಂದ ಸಾಗರಕ್ಕೆ ಬಂದು ಮುಷ್ಕರ ಮಾಡುತ್ತಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ಪ್ರಮುಖರಾದ ಶಿ.ಜು. ಪಾಶ, ಹುಲ್ತಿಕೊಪ್ಪ ಶ್ರೀಧರ್ ಉಪಸ್ಥಿತರಿದ್ದರು.

Leave a Comment