ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಿ ; ಡಿಸಿ ಗುರುದತ್ತ ಹೆಗಡೆ

0 227

ಶಿವಮೊಗ್ಗ : ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರು ಪೂರೈಕೆ ಹಾಗೂ ಬರ ನಿರ್ವಹಣೆ ಕುರಿತು ಮಾ.23 ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಒಂದು ದಿನವೂ ವ್ಯತ್ಯಯವಾಗದಂತೆ ತಾಲ್ಲೂಕುಗಳ ಇಓ ಗಳು, ತಹಶೀಲ್ದಾರರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ವಹಿಸಬೇಕು. ಸಮಸ್ಯಾತ್ಮಕ ಗಾಮಗಳು ಮತ್ತು ವಾರ್ಡ್‌ಗಳ ಪಟ್ಟಿ ಈಗಾಗಲೇ ತಯಾರಿಸಿಕೊಂಡಿದ್ದೀರಿ. ಮತ್ತೆ ಇನ್ನೆಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ಮತ್ತೊಮ್ಮೆ ಪರಿಶೀಲಿಸಬೇಕು. ಗ್ರಾಮೀಣ ಕುಡಿಯುವ ನೀರು ಇಲಾಖೆಯವರು ಇಓ, ತಹಶೀಲ್ದಾರರು ಇತರೆ ಅಧಿಕಾರಿಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಬರ ನಿರ್ವಹಣೆಯಲ್ಲಿ ತೊಡಗಿಕೊಳ್ಳಬೇಕು.

ಚುನಾವಣಾ ನೀತಿ ಸಂಹಿತೆಯು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕಾಮಗಾರಿಗೆ ಅಡ್ಡಿಪಡಿಸುವುದಿಲ್ಲ. ಚುನಾವಣಾ ಕರ್ತವ್ಯದೊಂದಿಗೆ ಕುಡಿಯುವ ನೀರಿನ ನಿರ್ವಹಣೆಗೆ ಸಹ ಹೆಚ್ಚಿನ ಗಮನವನ್ನು ಅಧಿಕಾರಿಗಳು ನೀಡಬೇಕು. ಜೂನ್‍ವರೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಟೆಂಡರ್ ಕರೆದು ಟ್ಯಾಂಕರ್‍ ಗಳ ಮೂಲಕ ನೀರು ಸರಬರಾಜು ಮಾಡುಬಹುದಾಗಿದ್ದು ಪಿಡಿಓ ಗಳು ಕ್ರಮ ವಹಿಸಬೇಕೆಂದರು.

ನೀರಿನ ಸಂಗ್ರಹಣೆಗಳು, ಜಲಾಶಯಗಳು, ಬಹುಗ್ರಾಮ ನೀರಿನ ಯೋಜನೆಗಳಡಿ ನೀರನ್ನು ಪೋಲು ಮಾಡಬಾರದು. ಅಚ್ಚುಕಟ್ಟಾಗಿ ನೀರನ್ನು ಬಳಸಬೇಕು. ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳಿದ್ದು ನೀರಿನ ಬಳಕೆ ಕುರಿತು ಸಮರ್ಪಕವಾಗಿ ಯೋಜಿಸಿಕೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದರು.

ಜಿಲ್ಲೆಯಲ್ಲಿ ಮುಂಬರುವ ತಿಂಗಳಲ್ಲಿ ಒಟ್ಟು 238 ಗ್ರಾಮಗಳು ಮತ್ತು 11 ವಾರ್ಡ್‌ಗಳಲ್ಲಿ ಕುಡಿಯುವ ನೀರಗೆ ಸಮಸ್ಯೆ ಎದುರಾಗಬಹುದೆಂದು ಗುರುತಿಸಲಾಗಿದ್ದು ಹೆಚ್ಚಿನ ಇಳುವರಿ ನೀಡುವ 68 ಬೋರ್‌ವೆಲ್‌ಗಳೊಂದಿಗೆ ಮುಂಗಡ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಮಾ.15 ರ ವೇಳೆಗೆ 11,39,057 ಮೆಟ್ರಿಕ್ ಟನ್ ಅಂದರೆ 42 ವಾರಗಳಿಗೆ ಸಾಕಾಗುವಷ್ಟು ಲಭ್ಯತೆ ಇದೆ. ಹಾಗೂ ಮುಂಬರುವ ತಿಂಗಳಲ್ಲಿ ಮೇವಿನ ಕೊರತೆ ಉಂಟಾದಲ್ಲಿ ಮೇವು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದ ಅವರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಹೊಂಡ ಅಥವಾ ತೊಟ್ಟಿಗಳನ್ನು ನಿರ್ಮಿಸಿ ಸಹಕರಿಸಬೇಕೆಂದರು.

2023 ರ ಮುಂಗಾರು ಹಂಗಾಮಿಗೆ 2023 ರ ಏಪ್ರಿಲ್‍ನಿಂದ 2024 ರ ಮಾರ್ಚ್ ವರೆಗೆ ಯೂರಿಯಾ, ಡಿಪಿಎ, ಎಂಒಪಿ, ಎನ್‍ಪಿಕೆ ಕಾಂಪ್ಲೆಕ್ಸ್, ಎಸ್‍ಎಸ್‍ಪಿ ಸೇರಿ 138420 ಮೆ.ಟನ್ ಬೇಡಿಕೆ ಇದ್ದು ಒಟ್ಟು ಇಲ್ಲಿವರೆಗೆ 129818 ಮೆ.ಟನ್ ಗೊಬ್ಬರ ವಿತರಣೆ ಆಗಿದೆ. 39943 ಮೆ.ಟನ್ ಉಳಿಕೆ ದಾಸ್ತಾನು ಇದ್ದು ಪ್ರಸ್ತುತ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದರು.

ನರೇಗಾದಡಿ ಕೆಲಸ ನೀಡಿರಿ :
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಬೇಸಿಗೆ ಅವಧಿಯಲ್ಲಿ ಅವರಿಗೆ ಹೆಚ್ಚಿನ ದಿನಗಳ ಕೆಲಸವನ್ನು ನೀಡುವಂತಾಗಬೇಕು. ಪಂಚಾಯಿತಿ ವಾರು ಕೆಲಸ ನೀಡಲು ಯೋಜಿಸಿಕೊಳ್ಳಬೇಕು. ಬೇಸಿಗೆಯಾದ್ದರಿಂದ ಬೆಳಿಗ್ಗೆ ಬೇಗ ಕೆಲಸ ನೀಡಿ ಬೇಗ ಮುಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ಮಾತನಾಡಿ, ತಾಲ್ಲೂಕುಗಳ ಇಓಗಳು, ತಹಶೀಲ್ದಾರರು, ಆರ್‍.ಡಬ್ಲ್ಯು.ಎಸ್ ಇಲಾಖೆಯ ಎಇಇ ರವರು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಬಾರದಂತೆ ಕ್ರಮ ವಹಿಸಬೇಕು. ಅಧಿಕಾರಿಗಳು ಸ್ವತಃ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಬಗೆಹರಿಸಬೇಕು. ಎನ್‍ಡಿಆರ್‍ಎಫ್ ಅನುದಾನ ಲಭ್ಯತೆ ಇದ್ದು ಕುಡಿಯುವ ನೀರಿನ ಸಮಸ್ಯೆ ಇರುವೆಡೆ 24 ಗಂಟೆಯೊಳಗೆ ಪರಿಹಾರ ನೀಡಬೇಕು. ಒಂದೇ ಒಂದು ಕುಟುಂಬ ಸಹ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುವಂತೆ ಆಗಬಾರದು. ಯಾವುದೇ ರೀತಿಯ ದೂರು ಬಾರದಂತೆ ಕುಡಿಯುವ ನೀರನ್ನು ನಿರ್ವಹಿಸಬೇಕು. ಖಾಸಗಿ ಬೋರ್‍ವೆಲ್‍ನ್ನು ಗುರುತಿಸಲಾಗಿದ್ದು ಮುಂಗಡ ಒಪ್ಪಂದ ಬೇಗ ಮಾಡಿಕೊಳ್ಳಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ, ಎಸಿ ಯತೀಶ್, ತಹಶೀಲ್ದಾರರು, ಇಓ ಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.