ಹೆದ್ದಾರಿಪುರ ಪ್ರೌಢಶಾಲೆಯಲ್ಲಿ SSLC ವಿದ್ಯಾರ್ಥಿಗಳ ಬೀಳ್ಕೊಡುಗೆ ನಂತರ ಕಿಡಿಗೇಡಿ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ದಾಂಧಲೆ, ಪೀಠೋಪಕರಣಗಳು ಪೀಸ್…ಪೀಸ್…

0 945

ರಿಪ್ಪನ್‌ಪೇಟೆ: ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾರದಾ ಪೂಜೆ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಶಾಲೆಯಲ್ಲಿ ದಿಢೀರ್ ದಾಂಧಲೆ ನಡೆಸುವುದರೊಂದಿಗೆ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಸ್ವಕ್ಷೇತ್ರದಲ್ಲಿ ಇಂತಹ ಘಟನೆ ನಡೆದು ಮುಜುಗರಕ್ಕೆ ಎಡೆ ಮಾಡಿದಂತಾಗಿದೆ. ಮಲೆನಾಡಿನ ವಿದ್ಯಾರ್ಥಿಗಳು ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪೋಷಕರ ಶಿಕ್ಷಕರ ಹಾಗೂ ತಮ್ಮ ಪ್ರತಿಭೆಯ ಸಹಕಾರದಿಂದ ಉನ್ನತ ಶಿಕ್ಷಣವನ್ನು ಪಡೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಅಂತ ಮಲೆನಾಡಿನ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯ ಕೆಲ ಕಿಡಿಗೇಡಿ ವಿದ್ಯಾರ್ಥಿಗಳ ಪುಂಡಾಟಿಕೆಯ ಅಟ್ಟಹಾಸದಿಂದ ಪೋಷಕರು ಶಿಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಹಾಗೂ ಗ್ರಾಮಸ್ಥರು ಮರ್ಯಾದಿಗೆ ಅಂಜಿ ತಲೆ ತಗ್ಗಿಸುವಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುನ್ನ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ದಾಂಧಲೆ ನಡೆಸಿ ತರಗತಿಯಲ್ಲಿನ ಕುರ್ಚಿ, ಟ್ಯೂಬ್‌ಲೈಟ್, ಫ್ಯಾನ್, ಹೆಂಚು, ಕಿಟಕಿ-ಬಾಗಿಲು ಕ್ಷಣ ಮಾತ್ರದಲ್ಲಿ ಪೀಸ್-ಪೀಸ್ ಆಗಿವೆ.

ಪುಂಡ ವಿದ್ಯಾರ್ಥಿಗಳ ಅಟ್ಟಹಾಸದಿಂದ ಶಾಲೆಯ ಮರ್ಯಾದೆ ಹೋಗುತ್ತದೆ ಹಾಗೂ ಸೋಮವಾದದಿಂದ ಆರಂಭವಾಗುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಶಾಲಾಭಿವೃದ್ಧಿ ಸಮಿತಿಯವರು ಶಿಕ್ಷಕರುಗಳು ಗ್ರಾಮಸ್ಥರು ಶನಿವಾರ ಶಾಲೆಯಲ್ಲಿ ತುರ್ತು ಸಭೆ ಕರೆದು ಪೀಠೋಪಕರಣಗಳನ್ನು ಹಾಳು ಮಾಡಿದ ಪುಂಡ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರುಗಳಿಗೆ ಬುದ್ದಿ ಹೇಳಿ ಕಳಿಸಿದ್ದಾರೆ.

ತಾವುಗಳು ಮಾಡಿದ ದಾಂಧಲೆಯ ವಿಡಿಯೋವನ್ನು ರೀಲ್ಸ್ ಮಾಡಿ ಪುಂಡ ವಿದ್ಯಾರ್ಥಿಗಳು ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿ ಶಾಲೆಯ ಮಾನವನ್ನು ಹರಾಜು ಹಾಕಿದಂತಾಗಿದೆ.

Leave A Reply

Your email address will not be published.

error: Content is protected !!