ಹೊಸನಗರದಲ್ಲಿ ಮೂರು ದಿನಗಳ ಹಲಸು ಆಹಾರ ಮೇಳ | ನಮ್ಮ ಬೆಳೆಗೆ ನಮ್ಮಲ್ಲೇ ಮಾರುಕಟ್ಟೆ ಸ್ಥಾಪನೆಯಾಗಬೇಕು: ಆರ್.ಎಂ ಮಂಜುನಾಥ ಗೌಡ

Written by Mahesha Hindlemane

Published on:

ಹೊಸನಗರ : ಆಹಾರ ಪದಾರ್ಥಗಳಲ್ಲಿ ಹೊಸನಗರ ಬ್ರಾಂಡ್ ಆಗುವಂತಹ ಸಂಪನ್ಮೂಲ ಬೆಳೆ ಇಲ್ಲಿದೆ. ಇವುಗಳಿಗೆ ನಮ್ಮಲ್ಲೇ ಉತ್ತಮ ಮಾರುಕಟ್ಟೆ ಸ್ಥಾಪನೆಯಾಗಬೇಕು ಎಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಕಳೂರು ಶ್ರೀ ರಾಮೇಶ್ವರ ಸಹಕಾರ ಸಂಘದ ವಜ್ರ ಮಹೋತ್ಸವ ಕಟ್ಟಡದಲ್ಲಿ ವಿವಿಧ ಸಹಕಾರಿ ಸಂಘಗಳ ಆಶ್ರಯದಲ್ಲಿ ಆಯೋಜಿಸಲಾದ ಮೂರು ದಿನಗಳ ಹಲಸು ಮತ್ತು ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಲಭ್ಯವಿರುವ ಹಲಸು, ಮಾವು, ಅಪ್ಪೆ ಮಾವಿನಮಿಡಿ ಮತ್ತಿತರರ ಬೆಳೆಗಳು ಪೇಟೆ ಪಟ್ಟಣಗಳಲ್ಲಿ ಹೆಸರು ಮಾಡಿವೆ. ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಹೊಸನಗರ ತಾಲ್ಲೂಕಿನ ಆಹಾರ ಬೆಳೆಗಳು ಹೆಚ್ಚು ಜನಾಕರ್ಷಣೆಯಾಗಿದೆ. ಅಲ್ಲದೆ ಉತ್ತಮ ಬೆಲೆ ಸಂಪಾದಿಸಿದೆ.
ಇಲ್ಲಿನ ಪದಾರ್ಥಗಳಿಗೆ ಪೇಟೆಯಲ್ಲಿ ಸಿಗುವ ಮಾರುಕಟ್ಟೆ ವ್ಯವಸ್ಥೆಯನ್ನು ಇಲ್ಲಿಯೇ ಕಲ್ಪಿಸಬೇಕು. ಈ ದೃಷ್ಟಿಯಲ್ಲಿ ಇಂತಹ ಮೇಳಗಳ ಆಯೋಜನೆ ಅರ್ಥಪೂರ್ಣ ಆಗುತ್ತವೆ ಎಂದರು.

ಅಡಿಕೆ ಅಕ್ರಮ:

ಹೆಚ್ಚಿನ ಹಣದಾಸೆಗೆ ಬಲಿಬಿದ್ದ ದಂಧೆಕೋರರು ಸಾಂಪ್ರದಾಯಿಕ ಬೆಳೆ ಅಡಿಕೆಗೆ ಹಾನಿಕಾರಕ ಬಣ್ಣ ಹಚ್ಚುವ ಕರಾಳ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇದರಿಂದ ಅಡಿಕೆ ವ್ಯಾಪಾರ ವಹಿವಾಟು ದಿಕ್ಕು ತಪ್ಪಿದಂತಾಗಿದೆ. ನಮ್ಮ ಸಾಂಪ್ರದಾಯಿಕ ಬೆಳೆ ಅಡಿಕೆಗೆ ನ್ಯಾಯಯುತ ಬೆಲೆ, ಮಾನ್ಯತೆ ಲಭ್ಯವಾಗುವಂತೆ ಲಕ್ಷ ಹರಿಸಬೇಕು ಎಂದರು.

ಮೇಳ ವಿಶೇಷ :

ಹಲಸು ಮೇಳ ಹೊಸನಗರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಹಲಸಿನ ಮೇಳದಲ್ಲಿ ಹಲಸಿನ ಹಣ್ಣಿನ ವೈವಿಧ್ಯಮಯ ತಿನಿಸುಗಳಾದ ಹಲಸಿನ ಪೋಡಿ, ಕಡುಬು, ಕಟ್ಲೆಟ್, ಕಬಾಬ್, ಚಿಲ್ಲಿ, ಶೀರ, ಬಿರಿಯಾನಿ, ಮಂಚೂರಿ, ಪತ್ರೊಡೆ, ಪಾಯಸ, ಜಿಲೇಬಿ, ಹೋಳಿಗೆ, ಮುಳ್ಕ ಮತ್ತು ಐಸ್ ಕ್ರೀಮ್‌ಗಳಂತಹ ತಿನಿಸುಗಳು ಜನರನ್ನು ಆಕರ್ಷಿಸಿದವು.

ಕೃಷಿ ಮತ್ತು ಗೃಹೋಪಯೋಗಿ ಉತ್ಪನ್ನಗಳಾದ ಖಾದಿ ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಗೋ ಉತ್ಪನ್ನಗಳು, ವಿವಿಧ ಬಗೆಯ ಉಪ್ಪಿನಕಾಯಿಗಳು, ಸುಂದರ ಶಿಲಾಮೂರ್ತಿಗಳು, ಸೀರೆಗಳು, ಆಂಟಿಕ್ ವಸ್ತುಗಳು, ಹಪ್ಪಳ ಮತ್ತು ಸಂಡಿಗೆ, ಮಸಾಲೆ ಉತ್ಪನ್ನಗಳು ಹಾಗೂ ಆದಿವಾಸಿ ಹೇರ್ ಆಯಿಲ್ ಮತ್ತು 1 ಗ್ರಾಂ ಗೋಲ್ಡ್ ಆಭರಣಗಳು ಮಾರಾಟಕ್ಕಿದ್ದವು. ಅಲ್ಲದೆ ಗಿಡ ಮತ್ತು ಬೀಜಗಳ ಮಾರಾಟವಿದ್ದು ಮೇಳದಲ್ಲಿ ಹಲಸು, ಮಾವು, ಹೂವಿನ ಗಿಡಗಳು ಮತ್ತು ತರಕಾರಿ ಬೀಜಗಳ ಮಳಿಗೆ ಗಮನ ಸೆಳೆದವು.

ಈ ವೇಳೆ ಕೃಷಿಯಲ್ಲಿ ಸಾಧನೆ ಮಾಡಿದ ಹಿರಿಯ ರೈತರನ್ನು ಸನ್ಮಾನಿಸಲಾಯಿತು.
ಶಿಮೂಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಸಹಕಾರಿ ಧುರೀಣ ವಿನಯಕುಮಾರ್ ದುಮ್ಮ, ಎಂ.ವಿ‌ ಜಯರಾಮ್, ವಾಟಗೋಡು ಸುರೇಶ್ ಇದ್ದರು.

ಕಳೂರು ಸಹಕಾರ ಸಂಘದ ಅಧ್ಯಕ್ಷ ವಿನಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೇಬೈಲು ವಂದಿಸಿದರು.

Leave a Comment