ರಿಪ್ಪನ್ಪೇಟೆ : ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿದೆ. ಜೊತೆಗೆ ಅವಶ್ಯಕತೆಗಿಂತ ಹೆಚ್ಚಾಗಿ ರೈತರು ಬಳಸುತ್ತಿರುವುದು ವಿಷಾದಕರ ಸಂಗತಿ. ಹೆಚ್ಚಿನ ರಾಸಾಯನಿಕಗಳ ಬಳಕೆಯಿಂದ ಭೂಮಿಯ ಆರೋಗ್ಯ ಹಾಳಾಗುತ್ತಿದ್ದು ನಾವು ಬೆಳೆಯುವ ಪ್ರತಿ ಬೆಳೆಯಲ್ಲಿಯೂ ಸಹ ರಾಸಾಯನಿಕ ಅಂಶ ಕಂಡು ಬರುತ್ತಿದೆ. ರಾಸಾಯನಿಕಗಳನ್ನು ಪರೋಕ್ಷವಾಗಿ ನಾವು ನಿತ್ಯ ಸೇವಿಸುತ್ತಿದ್ದು ಕ್ಯಾನ್ಸರ್ನಂತಹ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಆದ್ದರಿಂದ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು ಸಾವಯವ ಕೃಷಿಗೆ ಒತ್ತು ನೀಡಬೇಕು ಹೊಸನಗರ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಭದ್ರಪ್ಪ ರೈತರಿಗೆ ಕರೆ ನೀಡಿದರು.
ಅಮೃತ (ಗರ್ತಿಕೆರೆ) ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಲಾದ ಪಿಎಂ-ಆರ್ಕೆವಿವೈ ಯೋಜನೆಯಡಿ ಪೀಡೆನಾಶಕಗಳ ಸುರಕ್ಷಿತ ಮತ್ತು ವಿವೇಚನಾಯುಕ್ತ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಜ್ಞಾನಿ ನವೀನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ರೋಗ ಮತ್ತು ಕೀಟ ಹತೋಟಿಗೆ ಬೇಕಾದ ರಾಸಾಯನಿಕಗಳನ್ನು ಮಾತ್ರ ಬಳಸಬೇಕು. ರಾಸಾಯನಿಕ ಬಳಕೆ ಮುನ್ನ ಡಬ್ಬಿಗಳ ಮೇಲಿನ ಸೂಚನೆಗಳನ್ನು ಓದಬೇಕು. ಸಿಂಪರಣೆ ಮುನ್ನ ಸುರಕ್ಷತಾ ವಸ್ತುಗಳನ್ನು ಬಳಸಬೇಕು. ಮುಗಿದ ನಂತರ ಬಾಟಲಿಗಳನ್ನು ಮಣ್ಣಿನ ಆಳದಲ್ಲಿ ಹೂಳಬೇಕು ಎಂದು ರೈತರಿಗೆ ಕೀಟನಾಶಕ ಸಿಂಪರಣೆಗೆ ಮುನ್ನ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ರೈತ ಮುಖಂಡ ಹೆಚ್.ಎಂ.ರಾಘವೇಂದ್ರ ಮಾತನಾಡಿ, ರೈತರು ಸಾವಯವ ಕೃಷಿ ಅಳವಡಿಸಿಕೊಂಡರೆ ಮಾತ್ರ ಆರೋಗ್ಯಯುತವಾಗಿ ಇರಲು ಸಾಧ್ಯ. ಬೆಳೆಗಳಿಗೆ ರಾಸಾಯನಿಕಗಳನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ. ಸಾವಯುವ ಪೀಡೆನಾಶಕಗಳನ್ನು ತಯಾರಿಸಿ ಸಂಪರಣೆ ಮಾಡಿ ಬೆಳೆಯ ಮಣ್ಣಿನ ಹಾಗೂ ಮನುಷ್ಯ ಸಂಕುಲದ ಅರೋಗ್ಯ ಕಾಪಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಬಷೀರ್ಅಹಮ್ಮದ್, ರಾಮಚಂದ್ರ ಬಂಡಿ, ಸೋಮಶೇಖರ ತಾರಿಗ, ಲಿಂಗರಾಜ್, ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ರವಿಕುಮಾರ್ ಹಾಗೂ ರೈತರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





