ಶಿವಮೊಗ್ಗ

ಆಗಸ್ಟ್ 7ರಿಂದ ಮೂರು ದಿನ ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಪ್ರವಾಸ ; ಮಳೆಹಾನಿ ಪ್ರದೇಶಗಳ ಪರಿಶೀಲನೆ

ಶಿವಮೊಗ್ಗ,: ಸಚಿವ ಎಸ್. ಮಧು ಬಂಗಾರಪ್ಪ ಅವರು ಆಗಸ್ಟ್ 7ರಿಂದ 9ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಶಿವಮೊಗ್ಗ : ಸಚಿವ ಎಸ್. ಮಧು ಬಂಗಾರಪ್ಪ ಅವರು ಆಗಸ್ಟ್ 7ರಿಂದ 9ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ವೇಳೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಸೊರಬ, ಶಿಕಾರಿಪುರ, ಶಿವಮೊಗ್ಗ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಸಚಿವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ವಿಕೋಪ ನಿರ್ವಹಣಾ ಕಾರ್ಯಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಆಗಸ್ಟ್ 7: ಸೊರಬ ತಾಲೂಕು ಪ್ರವಾಸ

ಆಗಸ್ಟ್ 7ರಂದು ಬೆಳಿಗ್ಗೆ 10 ಗಂಟೆಗೆ ಸೊರಬ ತಾಲೂಕಿನ ಬಂಗಾರಧಾಮಕ್ಕೆ ಸಚಿವರು ಭೇಟಿ ನೀಡಲಿದ್ದಾರೆ. ನಂತರ ಸೊರಬ ರಂಗಮಂದಿರದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಸೊರಬ ಕ್ಷೇತ್ರ ವ್ಯಾಪ್ತಿಯ ಅತಿವೃಷ್ಟಿ ಮತ್ತು ಅನಾವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.

ಆಗಸ್ಟ್ 8: ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಸಭೆ

ಆಗಸ್ಟ್ 8ರಂದು ಬೆಳಿಗ್ಗೆ 10 ಗಂಟೆಗೆ ಶಿಕಾರಿಪುರ ತಾಲೂಕಿನ ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಸ್ಥಿತಿಯ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಚಿವರು ಚರ್ಚಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ನಗರಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂತರ ಮಧ್ಯಾಹ್ನ 2.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ತಾಲೂಕು ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಪ್ರವಾಹ, ಮಳೆಹಾನಿ ಹಾಗೂ ವಿಕೋಪ ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ.

ಆಗಸ್ಟ್ 9: ತೀರ್ಥಹಳ್ಳಿಯ ಗುಡ್ಡಕುಸಿತ ಸ್ಥಳಕ್ಕೆ ಭೇಟಿ

ಆಗಸ್ಟ್ 9ರಂದು ಬೆಳಿಗ್ಗೆ 9.30ಕ್ಕೆ ತೀರ್ಥಹಳ್ಳಿ ತಾಲೂಕಿನ ಇಂದಿರಾನಗರಕ್ಕೆ ಸಚಿವರು ಭೇಟಿ ನೀಡಲಿದ್ದಾರೆ.

ಇತ್ತೀಚೆಗೆ ಗುಡ್ಡ ಕುಸಿದ ಸ್ಥಳವನ್ನು ಪರಿಶೀಲಿಸಿ, ಘಟನೆಯಿಂದ ತೊಂದರೆಗೊಳಗಾದ ಕುಟುಂಬಗಳ ಮನೆಗಳಿಗೆ ತೆರಳಿ ಸಾಂತ್ವನ ಹೇಳಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ತೀರ್ಥಹಳ್ಳಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಹಾರ, ಪುನರ್ವಸತಿ ಮತ್ತು ಸುರಕ್ಷತಾ ಕ್ರಮಗಳ ಕುರಿತು ಸೂಚನೆ ನೀಡಲಿದ್ದಾರೆ.

ಸಚಿವರ ಮೂರು ದಿನಗಳ ಜಿಲ್ಲಾ ಪ್ರವಾಸದ ವೇಳಾಪಟ್ಟಿಯನ್ನು ಅವರ ಆಪ್ತ ಕಾರ್ಯದರ್ಶಿಗಳು ಪ್ರಕಟಿಸಿದ್ದಾರೆ.

Leave a Comment