ಸೊರಬ

ಮಧು ಬಂಗಾರಪ್ಪಗೆ ಸೊರಬದಲ್ಲಿ ಅದ್ಧೂರಿ ಸ್ವಾಗತ: ಶಿರಾಳಕೊಪ್ಪದಿಂದ ಸೊರಬವರೆಗೆ ಅಭಿಮಾನಿಗಳ ಸಂಭ್ರಮ

ಶಿವಮೊಗ್ಗ: ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಮಧು ಬಂಗಾರಪ್ಪ ಅವರು ಸಚಿವರಾಗಿ ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರದಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಸಂಭ್ರಮಾಚರಣೆ ನಡೆಯಿತು.

ಶಿರಾಳಕೊಪ್ಪದಿಂದ ಸೊರಬವರೆಗೆ ಮಧು ಬಂಗಾರಪ್ಪ ಅವರಿಗೆ ವಿವಿಧೆಡೆ ಅದ್ಧೂರಿ ಸ್ವಾಗತ ಕೋರಲಾಯಿತು. ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂಮಳೆ ಸುರಿಸಿ, ಡೊಳ್ಳು ಕುಣಿತದೊಂದಿಗೆ ಸಂಭ್ರಮಿಸಿದರು. ಮಧು ಬಂಗಾರಪ್ಪ ಅವರನ್ನು ಬರಮಾಡಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಕಂಡುಬಂತು.

ಸಚಿವರಾಗಿ ಮರು ಆಯ್ಕೆಯಾದ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಮಧು ಬಂಗಾರಪ್ಪ ಅವರಿಗೆ ಕಾರ್ಯಕರ್ತರು, ಅಭಿಮಾನಿಗಳು, ಹಿರಿಯರು, ಮಹಿಳೆಯರು ಹಾಗೂ ಯುವಕರು ಶುಭಾಶಯ ಕೋರಿದರು. ಹಲವೆಡೆ ಹಾರ ಹಾಕಿ, ಪುಷ್ಪಾರ್ಚನೆ ಮಾಡಿ, ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು.

ಸೊರಬ ಪಟ್ಟಣದ ಬಂಗಾರಧಾಮದ ಎದುರಿನ ವೃತ್ತದಲ್ಲಿ ಪಟಾಕಿ ಸಿಡಿಸಿ, ಹೂ ಎರಚಿ, ಡೊಳ್ಳು ವಾದನದೊಂದಿಗೆ ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಲಾಯಿತು. ಬಂಗಾರಧಾಮದಲ್ಲಿ ಅಪ್ಪ ಎಸ್. ಬಂಗಾರಪ್ಪ ಹಾಗೂ ಅಮ್ಮ ಶಕುಂತಲಾ ಅವರ ಸಮಾಧಿ ಸ್ಥಳಕ್ಕೆ ಹೂ ಹಾಕಿ ನಮಿಸಿದರು. ಅಲ್ಲಿಂದ ಬೆಂಬಲಿಗರು ರಂಗಮಂದಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಬೆಂಬಲಿಗರಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, “ಅಬ್ಬಾ! ಅದೆಂತಹ ಪ್ರೀತಿ ನಿಮ್ಮದು! ನಿಮ್ಮೆಲ್ಲರ ಪ್ರೀತಿ-ವಿಶ್ವಾಸ ಕಂಡು ನನಗೆ ಮಾತೇ ಹೊರಡುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

“ದೂರ ದೂರದಿಂದ ಬಂದು, ನಾನು ಬರುವವರೆಗೂ ಕಾದು ನಿಂತು ಹೂಮಳೆ ಸುರಿಸಿ, ಡೊಳ್ಳುಕುಣಿತದೊಂದಿಗೆ ನನ್ನನ್ನು ನೀವು ಬರಮಾಡಿಕೊಂಡ ರೀತಿ ನನ್ನ ಮನದಲ್ಲಿ ಅಚ್ಚಳಿಯದೆ ಉಳಿಯಲಿದೆ. ಅದರಲ್ಲಿಯೂ ವಯಸ್ಸಾದವರು ಹಾಗೂ ಚಿಕ್ಕಮಕ್ಕಳು ನನ್ನನ್ನು ಅಭಿನಂದಿಸಲು ಹಂಬಲಿಸುತ್ತಿದ್ದ ದೃಶ್ಯಗಳು ಬಹುಕಾಲ ನನ್ನ ನೆನಪಿನಲ್ಲಿ ಉಳಿಯುತ್ತವೆ,” ಎಂದು ಅವರು ತಿಳಿಸಿದ್ದಾರೆ.

ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹಾರೈಕೆಗಳಿಂದಾಗಿ ತಾವು ಹಿಗ್ಗಿದ್ದೇನೆ ಎಂದು ಹೇಳಿರುವ ಮಧು ಬಂಗಾರಪ್ಪ, “ನನ್ನ ಸೊರಬದ ನಿಮ್ಮೆಲ್ಲರ ಈ ಪ್ರೀತಿಗೆ ನಾನು ಎಂದೆಂದಿಗೂ ಋಣಿ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆಯೇ ಇರಲಿ,” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಮಧು ಬಂಗಾರಪ್ಪ ಅವರು ಸಚಿವರಾಗಿ ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಸೊರಬ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ವಿಶ್ವಾಸವನ್ನು ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

Leave a Comment